ಲಕ್ನೋ, ಜ 14 (Daijiworld News/MSP): ಹಲವು ನಗರ - ಪಟ್ಟಣಗಳಲ್ಲಿ ನಾಯಿಗಳ ಉಪಟಳ ಹೆಚ್ಚಾಗಿ ಮಕ್ಕಳು, ವೃದ್ದರ ಮೇಲೆ ದಾಳಿ ನಡೆಸಿರುವ ಸುದ್ದಿಗಳು ಅಲ್ಲಲ್ಲಿ ವರದಿಯಾಗುತ್ತಿರುತ್ತದೆ.
ಇದಕ್ಕಿಂದಲೂ ಬೆಚ್ಚಿಬೀಳಿಸುವ ಘಟನೆ ಲಕ್ನೋದ ಫಾರೂಖಾಬಾದ್ ನಲ್ಲಿ ನಡೆದಿದೆ. ಆಸ್ಪತ್ರೆಯ ಒಳಗೆ ನುಗ್ಗಿದ ಬೀದಿ ನಾಯಿ ನವಜಾತ ಶಿಶುವನ್ನು ಕಚ್ಚಿ ಕೊಂದು ಹಾಕಿರುವ ಘಟನೆ ನಡೆದಿದೆ.
ಸ್ಥಳೀಯ ನಿವಾಸಿ, ರವಿ ಕುಮಾರ್ ಪತ್ನಿ ಕಾಂಚನಾ ಅವರನ್ನು ಹೆರಿಗೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಸಿಸೇರಿಯನ್ ಹೆರಿಗೆ ಮೂಲಕ ಕಾಂಚನ ಗಂಡು ಮಗುವಿಗೆ ಜನ್ಮ ನೀಡಿದ್ದರು. ತಾಯಿಯನ್ನು ಬಾಣಂತಿ ವಾರ್ಡ್ ಗೆ ಸ್ಥಳಾಂತರಿಸಲಾಯಿತು.
ರವಿ ಕುಮಾರ್ ಎಂಬವರು ಗರ್ಭಿಣಿ ಪತ್ನಿ ಕಾಂಚನಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಆಕೆಯನ್ನು ಸಿ ಸೆಕ್ಷನ್ ಆಪರೇಷನ್ ಥಿಯೇಟರ್ ನೊಳಗೆ ಕರೆದೊಯ್ದಿದ್ದರು. ಕಾಂಚನ ಗಂಡು ಮಗುವಿಗೆ ಜನ್ಮ ನೀಡಿದ್ದು, ಬಳಿಕ ಬಾಣಂತಿಯನ್ನು ಬೇರೆ ವಾರ್ಡ್ ಗೆ ಸ್ಥಳಾಂತರಿಸಿದ್ದರು. ಆದರೆ ಮಗುವನ್ನು ಆಪರೇಷನ್ ಥಿಯೇಟರ್ ನೊಳಗೆ ಇರಿಸಿದ್ದರು. ಕೆಲ ಸಮಯದ ಬಳಿಕ ಮಗು ಸಾವನ್ನಪ್ಪಿರುವುದಾಗಿ ಆಸ್ಪತ್ರೆಯ ಸಿಬ್ಬಂದಿಗಳು ರವಿ ಕುಮಾರ್ ಬಳಿ ಹೇಳಿದ್ದರು .
ಈ ವೇಳೆ ಗಾಬರಿಯಾಗಿ ಮಗುವನ್ನು ಇರಿಸಲಾಗಿದ್ದ ಅಪರೇಷನ್ ಥಿಯೇಟರ್ ಧಾವಿಸಿ ಬಂದಾಗ ನರ್ಸ್ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಬೀದಿನಾಯಿಯನ್ನು ಹೊರಗಟ್ಟಿಸುವ ಪ್ರಯತ್ನದಲ್ಲಿದ್ದರು. ಅವರನ್ನೆಲ್ಲಾ ತಳ್ಳಿ ರವಿ ಕುಮಾರ್ ಮತ್ತು ಕುಟುಂಬಸ್ಥರು ಆಪರೇಷನ್ ಥಿಯೇಟರ್ ಒಳಗೆ ಹೋದಾಗ ಮಗು ನೆಲದ ಮೇಲೆ ಬಿದ್ದಿದ್ದು, ಕುತ್ತಿಗೆ ಬಳಿ ಮಾಂಸವನ್ನು ನಾಯಿ ಕಚ್ಚಿ ತಿಂದಿರುವುದಾಗಿ ಆರೋಪಿಸಿದ್ದಾರೆ
ನವಜಾತ ಶಿಶುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಯ ಡಾ.ಮೋಹಿತ್ ಗುಪ್ತಾ ಹಾಗೂ ಕೆಲವು ಸಿಬ್ಬಂದಿಗಳ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಆಸ್ಪತ್ರೆಯ ವೈದ್ಯರ ಮೇಲೆ ಎಫ್ ಐಆರ್ ದಾಖಲಿಸಿ, ಆಸ್ಪತ್ರೆಗೆ ಬೀಗ ಜಡಿಯುವಂತೆ ಜಿಲ್ಲಾಧಿಕಾರಿ ಮಾನವೇಂದ್ರ ಸಿಂಗ್ ಆದೇಶ ನೀಡಿರುವುದಾಗಿ ವರದಿ ವಿವರಿಸಿದೆ.