ಹೈದರಾಬಾದ್, ಜ.14 (Daijiworld News/PY) : ಎರಡು ಸಮುದಾಯಗಳ ನಡುವೆ ನಡೆದ ಘರ್ಷಣೆ ಹೊಡಿದಾಟಕ್ಕೆ ತಿರುಗಿದ್ದು, 8 ಮಂದಿ ಪೊಲೀಸರು ಸೇರಿದಂತೆ 19 ಜನರು ಗಾಯಗೊಂಡಿದ್ದಾರೆ. ಈ ಸಂದರ್ಭ 13 ಮನೆಗಳಿಗೆ ಬೆಂಕಿ ಹಚ್ಚಿದ್ದು 26 ವಾಹನಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ತೆಲಂಗಾಣದ ಅದಿಲಾಬಾದ್ನಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಅದಿಲಾಬಾದ್ ಪ್ರದೇಶದಲ್ಲಿ ಸೋಮವಾರವೂ ಹಿಂಸಾಚಾರ ಮುಂದುವರೆದಿದ್ದು. ಬುಧವಾರದವರೆಗೂ ಜನರು ಗುಂಪುಗೂಡುವುದನ್ನು ನಿಷೇಧಿಸಲಾಗಿದೆ. ಅಲ್ಲದೇ ಅದಿಲಾಬಾದ್ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ ಎಂದು ವರದಿ ತಿಳಿಸಿದೆ.
ಜ.12 ಭಾನುವಾರ ರಾತ್ರಿ ರಾತ್ರಿ ಅದಿಲಾಬಾದ್ನ ಭಾಯಿನ್ಸಾ ಪ್ರದೇಶದಲ್ಲಿ ಕೆಲವು ಯುವಕರು ಬೈಕ್ ಸೈಲೆನ್ಸರ್ ತೆಗೆದು ವಿಪರೀತ ಸದ್ದು ಮಾಡುತ್ತಿರುವುದನ್ನು ಕೇಳಿದ ಕೆಲವು ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.ಈ ವಿಚಾರವಾಗಿ ಶುರುವಾದ ವಾಗ್ವಾದ ಘರ್ಷಣೆಗೆ ತಿರುಗುತ್ತಿದಂತೆ ಅಪರಿಚಿತ ವ್ಯಕ್ತಿಗಳು ಕಲ್ಲು ತೂರಾಟ ನಡೆಸಿರುವುದಾಗಿ ವರದಿ ತಿಳಿಸಿದೆ.
ಎರಡು ಕಡೆಯಿಂದಲೂ ಕಲ್ಲು ತೂರಾಟ ಆರಂಭವಾಗುವ ಮೂಲಕ ಹಿಂಸಾಚಾರ ಭುಗಿಲೆದಿದ್ದು. ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಹರಸಾಹಸ ಪಟ್ಟಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ 60 ಜನರನ್ನು ವಶಕ್ಕೆ ತೆಗೆದುಕೊಂಡಿದ್ದು, ಆರು ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.