ಹೊಸ ದಿಲ್ಲಿ, ಜ.14 (Daijiworld News/PY) : "ಉಗ್ರರಿಗೆ ನೆರವಾಗಿ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿ ದೇವಿಂದರ್ ಸಿಂಗ್ ಅವರ ಹೆಸರು ದೇವಿಂದರ್ ಖಾನ್ ಆಗಿದ್ದಲ್ಲಿ ಆರ್ಎಸ್ಎಸ್ನ ಪ್ರತಿಕ್ರಿಯೆಗಳೇ ಬದಲಾಗುತ್ತಿದ್ದವು" ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
ಈ ವಿಚಾರವಾಗಿ ಸರಣಿ ಟ್ಬೀಟ್ ಮಾಡಿದ ಅವರು, "ಈ ದೇಶದ ಶತ್ರುಗಳನ್ನು ಯಾವುದೇ ವರ್ಣ, ಜಾತಿ, ಧರ್ಮಗಳಿಂದ ಗುರುತಿಸಬಾರದು.ಕಣಿವೆ ರಾಜ್ಯದಲ್ಲಿ ರಕ್ಷಾ ಕವಚದಲ್ಲಿ ಬಿರುಕು ಮೂಡಿರುವುದು ಗೊತ್ತಾಗಿದೆ. ನಮ್ಮ ಗಮನ ಆ ಕಡೆ ಇರಬೇಕು" ಎಂದು ಚೌದರಿ ತಿಳಿಸಿದ್ದಾರೆ.
"ಪುಲ್ವಾಮಾ ದಾಳಿ ವಿಚಾರವಾಗಿಯೂ ತನಿಖೆ ಆಗಬೇಕು. ದೇವಿಂದರ್ ಸಿಂಗ್ ಬಂಧನದ ಬಳಿಕ ಪುಲ್ವಾಮಾ ಪ್ರಕರಣದ ಕುರಿತಾಗಿ ಹಲವು ಪ್ರಶ್ನೆಗಳು ಮೂಡಿವೆ. ಸಿಂಗ್ ವಿಚಾರಣೆ ವೇಳೆ ಪುಲ್ವಾಮಾ ದಾಳಿಯ ನಿಜವಾದ ಕಾರಣ ಹೊರಬೀಳಬಹುದು" ಎಂದರು.
ಶ್ರೀನಗರ ವಿಮಾನ ನಿಲ್ದಾಣದಲ್ಲಿ ಡಿಎಸ್ಪಿಯಾಗಿ ದೇವಿಂದರ್ ಸಿಂಗ್ ಕಾರ್ಯ ನಿರ್ವಹಿಸುತ್ತಿದ್ದರು. ಹಿಜ್ಬುಲ್ ಮುಜಾಹಿದ್ದೀನ್ ಎಂಬ ಉಗ್ರ ಸಂಘಟನೆಗೆ ಸೇರಿದ ನವೀದ್ ಬಾಬು ಹಾಗೂ ಅಲ್ತಾಫ್ ಜೊತೆಯಲ್ಲೇ ದೇವಿಂದರ್ ಸೆರೆ ಸಿಕ್ಕಿದ್ದು, ಭದ್ರತಾ ವ್ಯವಸ್ಥೆಗಳ ಬಗ್ಗೆ ಅನುಮಾನಗಳು ಮೂಡಿವೆ.
ನಾಲ್ಕು ತಿಂಗಳ ಹಿಂದೆಯಷ್ಟೇ ರಾಷ್ಟ್ರಪತಿಗಳಿಂದ ಪೊಲೀಸ್ ಪದಕ ಪಡೆದ ಅಧಿಕಾರಿ ಇದೀಗ ತನಿಖಾ ತಂಡದ ವಶದಲ್ಲಿದ್ದು. ನಿರಂತರ ವಿಚಾರಣೆ ಎದುರಿಸುತ್ತಿದ್ದಾರೆ.