ನವದೆಹಲಿ, ಜ 14 (Daijiworld News/MSP): ತೀವ್ರ ಟೀಕೆ ಹಾಗೂ ವಿರೋಧಕ್ಕೆ ಕಾರಣವಾಗಿದ್ದ ಆಜ್ ಕೇ ಶಿವಾಜಿ- ನರೇಂದ್ರ ಮೋದಿ ಹೆಸರಿನ ಪುಸ್ತಕವನ್ನು ಬರೆದಿದ್ದ ಲೇಖಕ ಇದೀಗ ಕ್ಷಮೆಯಾಚಿಸಿದ್ದಾರೆ. ಮಾತ್ರವಲ್ಲದೇ ಈ ಪುಸ್ತಕಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಪಕ್ಷ ಹೇಳಿಕೊಂಡಿದೆ.
ಲೇಖಕ ಜೇ ಭಗವಾನ್ ಗೋಯಲ್ ಅವರು ಬರೆದಿರುವ 'ಆಜ್ ಕಿ ಶಿವಾಜಿ: ನರೇಂದ್ರ ಮೋದಿ' ಪುಸ್ತಕ ನಿಷೇಧಿಸುವಂತೆ ಕಾಂಗ್ರೆಸ್ ಹಾಗೂ ಶಿವಸೇನೆ ಒತ್ತಾಯಿಸಿತ್ತು. ಮಾತ್ರವಲ್ಲ್ದೇ ರಾಜ್ಯಸಭೆ ಸದಸ್ಯರೂ ಆಗಿರುವ ಶಿವಾಜಿ ಮಹಾರಾಜರ ವಂಶಸ್ಥ ಬಿಜೆಪಿಯ ಸಾಂಭಾಜಿ ರಾಜೆ ಅವರೂ ಕೂಡಾ ಈ ಪುಸ್ತಕಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. "ಶಿವಾಜಿ ಮಹಾರಾಜರು ನಮ್ಮ ಪಾಲಿನ ಅಪ್ರತಿಮ ಮಹಾರಾಜರಾಗಿದ್ದರು. ಅವರೊಂದಿಗೆ ಇಂದಿನ ರಾಜಕಾರಣಿಗಳನ್ನು ಹೋಲಿಸುವುದು ಸರಿಯಲ್ಲ. ಸುಖಾಸುಮ್ಮನೆ ಮರಾಠಿಗರ ಭಾವನೆಗಳನ್ನು ಕೆರಳಿಸಬಾರದು," ಎಂದು ಹೇಳಿದ್ದರು.
ವಿವಾದಗಳು ಜೋರಾಗುತ್ತಿದ್ದಂತೆ ಪುಸ್ತಕವನ್ನು ಹಿಂಪಡೆದಿದ್ದು, ಈ ಕುರಿತುಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಪ್ರಕಾಶ್ ಜವಡೇಕರ್ ಅವರು, ಬಿಜೆಪಿಗೂ ಪುಸ್ತಕಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಪುಸ್ತಕ ಬರೆದ ಲೇಖಕ ಗೋಯಲ್ ಕೂಡ ಕ್ಷಮೆಯಾಚಿಸಿದ್ದಾರೆ. ವಿವಾದಿತ ಪುಸ್ತಕವನ್ನು ಹಿಂಪಡೆಯಲಾಗಿದ್ದು, ವಿವಾದಕ್ಕೆ ಅಂತ್ಯ ಹಾಡಲಾಗಿದೆ ಎಂದು ಹೇಳಿದ್ದಾರೆ.