ಬೆಂಗಳೂರು, ಜ 14 (Daijiworld News/MSP): 'ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ್ ಪೂಜಾರಿ ಕಡ್ತಲ ಎನ್ನುವರು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದು ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ' ಹಿರಿಯ ಪತ್ರಕರ್ತ ಹಾಗೂ ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಬೆಂಗಳೂರಿನ ಡಿ.ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಜ.11 ರಂದು ನಡೆಯಬೇಕಾಗಿದ್ದ ಬಿಲ್ಲವ - ಮುಸ್ಲಿಂ ಸಮಾವೇಶದಲ್ಲಿ ಪ್ರಮುಖ ಭಾಷಣಕಾರನಾಗಿ ಆಯ್ಕೆಯಾಗಿದ್ದ ನನ್ನನ್ನು ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ್ ಪೂಜಾರಿ ಕಡ್ತಲ ಎಂಬವರು ಕರೆ ಮಾಡಿ ಕಾರ್ಯಕ್ರಮ ನಿಲ್ಲಿಸುವಂತೆ ಬೆದರಿಸಿ ನನ್ನನ್ನು ಹಾಗೂ ತಾಯಿಯನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ , ನನ್ನನ್ನು ಹಾಗೂ ವಿನಯ್ ಕುಮಾರ್ ಸೊರಕೆ ಅವರನ್ನು ಗುಂಡು ಹೊಡೆದು ಕೊಲೆ ಮಾಡುತ್ತೇನೆಂದು ಪೋನ್ ಮೂಲಕ ಜೀವಬೆದರಿಕೆ ಹಾಕಿದ್ದಾರೆ.
ಮಾತ್ರವಲ್ಲದೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಸ್ಲಿಂ ಸಮುದಾಯವನ್ನು ಅಶ್ಲೀಲವಾಗಿ ನಿಂದಿಸಿ ಕೋಮು ಸಂಘರ್ಷಕ್ಕೆ ಪ್ರಚೋದಿಸಿ ಶಾಂತಿ ಕದಡುವಂತೆ ಮಾಡಿ ನಮ್ಮಿಬ್ಬರ ಸಂಭಾಷಣೆ ಆಡಿಯೋ ತುಣುಕನ್ನು ವೈರಲ್ ಮಾಡಿ, ಪ್ರಾಣ ಭಯವೊಡ್ಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.