ಬೆಂಗಳೂರು, ಜ 08 (DaijiworldNews/SM): ಅಕ್ರಮ ಆಸ್ತಿ ಸಂಪಾದನೆ, ವಿದೇಶದಲ್ಲಿ ಅಕ್ರಮ ಹೂಡಿಕೆ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡರಿಗೆ ಐಟಿ ಶಾಕ್ ನೀಡುತ್ತಿದ್ದು, ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಕೆ.ಜೆ.ಜಾರ್ಜ್ ಹಾಗೂ ಕುಟುಂಬದ ಸದಸ್ಯರಿಗೆ ಸಮನ್ಸ್ ಜಾರಿಗೊಳಿಸಲಾಗಿದೆ.
ಅಕ್ರಮ ಆಸ್ತಿಗಳಿಕೆ ಆರೋಪ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕಳೆದ ಡಿಸೆಂಬರ್ 23 ರಂದೇ ಕೆ.ಜೆ. ಜಾರ್ಜ್ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಜಾರ್ಜ್ ವಿದೇಶದಲ್ಲಿ ಮಕ್ಕಳು ಹಾಗೂ ಕುಟುಂಬದ ಸದಸ್ಯರ ಹೆಸರಿನಲ್ಲಿ ಆಸ್ತಿ ಮಾಡಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ನಮೂದಿಸಿಲ್ಲ ಎಂಬ ಆರೋಪ ಅವರ ಮೇಲಿದೆ. ಈ ಆರೋಪ ಮಾಡಿರುವ ಹೋರಾಟಗಾರ ರವಿಕೃಷ್ಣಾರೆಡ್ಡಿ ಅವರ ವಿರುದ್ಧ ದೂರು ನೀಡಿದ್ದರು.
ಇದೀಗ ವಿದೇಶದಲ್ಲಿ ಬ್ಯಾಂಕ್ ಖಾತೆ ಹೊಂದಿರುವ ಮಾಹಿತಿ ಇ.ಡಿ.ಗೆ ಲಭ್ಯವಾಗಿದ್ದು, ಹೀಗಾಗಿ ಕೆ.ಜೆ. ಜಾರ್ಜ್, ಅವರ ಪತ್ನಿ ಸುಜಾ ಜಾರ್ಜ್, ಮಕ್ಕಳಾದ ರಾಣಾ ಹಾಗೂ ರೆನಿಟಾ ಇವರ ಖಾತೆ ಇದೆ ಎಂಬ ಮಾಹಿತಿ ಸಂಗ್ರಹಿಸಿದೆ. ಹಾಗೂ ಇವರ ಹೆಸರುಗಳಲ್ಲಿ ದೇಶ-ವಿದೇಶದಲ್ಲಿರುವ ಸ್ಥಿರ ಹಾಗೂ ಚರಾಸ್ತಿ ಮಾಹಿತಿ ಕೋರಿ ಫೆಮಾ ಆಕ್ಟ್ ಅಡಿಯಲ್ಲಿ ಜಾರಿ ನಿರ್ದೇಶನಾಲಯ ಮಾಹಿತಿ ಕೇಳಿದ್ದು, ಇದೇ ತಿಂಗಳ 16ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.