ಶ್ರೀನಗರ, ಜ 15 (Daijiworld News/ MB) : ಕಾಶ್ಮೀರ ಕಣಿವೆಯಲ್ಲಿ ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಸೇವೆ ಪುನರ್ ಆರಂಭವಾಗಲಿದ್ದು ಸಾಮಾಜಿಕ ಜಾಲತಾಣಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಐದು ತಿಂಗಳಿಗೂ ಹೆಚ್ಚು ಕಾಲದಿಂದ ಸ್ಥಗಿತ ಮಾಡಲಾಗಿದ್ದ ಇಂಟರ್ನೆಟ್ ಸೇವೆ ಪ್ರಥಮವಾಗಿ 5 ಜಿಲ್ಲೆಗಳಲ್ಲಿ ಹಂತಹಂತವಾಗಿ ಈ 2ಜಿ ಇಂಟರ್ನೆಟ್ ಸೇವೆ ಜಾರಿಗೆ ಬರಲಿದ್ದು ಅತಿ ಮುಖ್ಯವಾದ ಸೇವೆಯನ್ನು ಒದಗಿಸುವ ಆಸ್ಪತ್ರೆಗಳು, ಬ್ಯಾಂಕ್ಗಳು, ಸರ್ಕಾರಿ ವೆಬ್ಸೈಟ್ ಗಳು, ಇತ್ಯಾದಿ ಹಲವು ಸಂಸ್ಥೆಗಳಿಗೆ ಬ್ರಾಡ್ ಬ್ಯಾಂಡ್ ಸೌಲಭ್ಯ ಒದಗಿಸಲಾಗುವುದು.
ಆದರೆ ಇದರ ದುರುಪಯೋಗವಾಗದಂತೆ ಆಯಾ ಸಂಸ್ಥೆಗಳು ನೋಡಿಕೊಳ್ಳಬೇಕು ಹಾಗೂ ದಾಖಲೆ ಮತ್ತು ಬಳಕೆಯನ್ನು ಮೇಲ್ಚಿಚಾರಣೆ ಮಾಡುವ ಸಲುವಾಗಿ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಲು ನೋಡಲ್ ಅಧಿಕಾರಿಗಳ ನೇಮಕ ಮಾಡಬೇಕು ಎಂದು ಸರ್ಕಾರ ನಿರ್ದೇಶನ ಮಾಡಿದೆ.
ಶ್ರೀನಗರ, ಮಧ್ಯ ಕಾಶ್ಮೀರದಲ್ಲಿ 2ಜಿ ಇಂಟರ್ನೆಟ್ ಸೇವೆ ಪುನರ್ ಆರಂಭವಾದ ಎರಡು ದಿನಗಳ ಬಳಿಕ ಬಂಡಿಪೋರಾ, ಬಾರಾಮುಲ್ಲಾ ಹಾಗೂ ಕುಪ್ವಾರಾದಲ್ಲಿ ನಂತರ ಅನಂತ್ನಾಗ್, ಪುಲ್ವಾಮ, ಕುಲ್ಗಂನಲ್ಲಿ ಹಂತಹಂತವಾಗಿ ಇಂಟನೆರ್ಟ್ ಸೌಲಭ್ಯ ಪುನರ್ ಆರಂಭವಾಗಲಿದೆ ಎಂದು ಸರ್ಕಾರ ತಿಳಿಸಿದೆ.
ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಸರ್ಕಾರ ರದ್ದು ಮಾಡಿದ ಬಳಿಕ ಅಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತ ಮಾಡಲಾಗಿತ್ತು, ಈಗ ಐದೂ ತಿಂಗಳಿಗೂ ಅಧಿಕ ಕಾಲ ಕಳೆದ ಬಳಿಕ ಹಂತಹಂತವಾಗಿ ಇಂಟರ್ನೆಟ್ ಸೇವೆಯನ್ನು ಪುನರ್ ಆರಂಭ ಮಾಡಲಾಗುತ್ತಿದೆ. ಆದರೆ ಸಾಮಾಜಿಕ ಜಾಲತಾಣಗಳಿಗೆ ನಿರ್ಬಂಧ ಹೇರಲಾಗಿದೆ.