ಶಬರಿಮಲೆ, ಜ 15 (Daijiworld News/ MB) : ಶಬರಿಮಲೆಯಲ್ಲಿ ಇಂದು ಸಂಜೆ 6.45ಕ್ಕೆ ಮಕರಜ್ಯೋತಿ ದರ್ಶನವಾಗಲಿದ್ದು ಅಧಿಕ ಸಂಖ್ಯೆಯಲ್ಲಿ ಭಕ್ತರ ಸಮೂಹ ನೆರೆದಿದೆ. ಈ ಹಿನ್ನಲೆಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ವೀಕ್ಷಣೆಗೆ 9 ಕೇಂದ್ರಗಳಲ್ಲಿದ್ದು ಇಂದು ಸಂಜೆ ಜ್ಯೋತಿ ದರ್ಶನವಾಗುವುದಾದರೂ ಮುಂಜಾನೆಯೇ 9 ಕೇಂದ್ರಗಳಲ್ಲಿ ಭಕ್ತರು ನಿಂತಿದ್ದಾರೆ.
ಇಂದು ಸಂಜೆ ಪೊನ್ನಂಬಲಮೇಡು ಗಿರಿಯಲ್ಲಿ ಮಕರಜ್ಯೋತಿ ಕಾಣಿಸಿಕೊಳ್ಳಲಿದ್ದು ತದನಂತರ ಜನವರಿ 20ರವರೆಗೂ ದೇಗುಲ ಸಾರ್ವಜನಿಕ ದರ್ಶನಕ್ಕಾಗಿ ತೆರೆದಿರಲಿದ್ದು, ಜನವರಿ 21 ರಂದು ಪಂದಳ ರಾಜ ಮನೆತನದ ಪೂಜಾ ಕಾರ್ಯಗಳು ಅಂತಿಮಗೊಂಡ ಬಳಿಕ ದೇಗುಲದ ಬಾಗಿಲು ಮುಚ್ಚಲಿದೆ ಎಂದು ವರದಿಗಳು ತಿಳಿಸಿವೆ.
ಶಬರಿಮಲೆಗೆ ಕಳೆದ ವರ್ಷಕ್ಕಿಂತ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿರುವ ಹಿನ್ನೆಲೆಯಲ್ಲಿ ಕೇರಳ ಸರಕಾರ ಮುನ್ನೆಚ್ಚರಿಕೆ ಕ್ರಮವಾಗಿ ಭಾರೀ ಬಂದೋಬಸ್ತ್ ಮಾಡಿದ್ದು ಕೇರಳ ಪೊಲೀಸ್ ಇಲಾಖೆಯ ಸಿಬಂದಿಗಳು, ರಾಪಿಡ್ ಆಕ್ಷನ್ ಫೋರ್ಸ್, ಎನ್.ಡಿ.ಆರ್.ಎಫ್ ಪಡೆಗಳ ಸಿಬಂದಿಗಳು ಭದ್ರತೆ ಹಾಗೂ ಭಕ್ತರ ಸುರಕ್ಷತೆಯ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳು ಸಿಬಂದಿಗಳಿಗೆ ಕರ್ತವ್ಯ ಹಂಚಿಕೆ ಮಾಡಿದ್ದು, ಯಾವುದೇ ಅಹಿತರ ಘಟನೆ ನಡೆಯದಂತೆ ಬಂದೋಬಸ್ತ್ ಮಾಡಿದ್ದಾರೆ.