ಶಿವಮೊಗ್ಗ, ಜ 15 (Daijiworld News/ MB) : ಮಾರ್ಚ್ ಐದರಂದು ರಾಜ್ಯ ಬಜೆಟ್ ಮಂಡನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ರಾಜ್ಯದ ಜನತೆಗೆ ಸಂಕ್ರಾಂತಿ ಶುಭಾಶಯ ಕೋರಿ ಶಿವಮೊಗ್ಗದಲ್ಲಿ ಮಾತನಾಡಿದ ಅವರು, " ಬಜೆಟ್ಗೆ ಸಂಬಂಧಿಸಿ ಫೆಬ್ರವರಿ ಅಂತ್ಯದೊಳಗೆ ಸಮಗ್ರ ಚರ್ಚೆ ಮಾಡಿ ಅಂತಿಮವಾಗಿ ಅನುಮೋದನೆ ಪಡೆದ ಬಳಿಕ ಮಾರ್ಚ್ ಐದರಂದು ರಾಜ್ಯ ಬಜೆಟ್ ಮಂಡನೆ ಮಾಡಲಾಗುವುದು. ಹಣಕಾಸು ಸ್ಥಿತಿಗತಿಯ ಪ್ರಕಾರ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ. ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.
ದಾವೋಸ್ನಲ್ಲಿ ಸಮಾವೇಶ ನಡೆಯಲಿದ್ದು ಅದರಲ್ಲಿ ಮೂರು ದಿನಗಳ ಕಾಲ ಭಾಗವಹಿಸಲಿದ್ದು ಜನವರಿ 19 ರಂದು ದಾವೋಸ್ ಗೆ ತೆರಳಿ, 23 ಕ್ಕೆ ವಾಪಾಸು ಬರಲಿದ್ದೇನೆ. ಈ ವೇಳೆ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಕೈಗಾರಿಕೋದ್ಯಮಿಗಳೊಂದಿಗೆ ಮಾತುಕತೆ ನಡೆಸಲಾಗುತ್ತದೆ. ಹಾಗೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಜನವರಿ 18 ರಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಆ ವೇಳೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಿ ಖಾತೆ ಹಂಚಿಕೆ ಮಾಡಲಾಗುತ್ತದೆ ಎಂದರು.