ಬೆಂಗಳೂರು, ಜ 15 (Daijiworld News/MSP): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೇದ ಪೊಲೀಸ್ ಗೊಲೀಬಾರ್ ಮತ್ತು ಹಿಂಸಾಚಾರದ ಬಗ್ಗೆ ನ್ಯಾಯಾಂಗ ತನಿಖೆ ಆದೇಶಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಂಗಳವಾರ ನೊಟೀಸ್ ಜಾರಿಗೊಳಿಸಿದೆ.
ಮಂಗಳೂರಿನಲ್ಲಿ ನಡೆದ ಗೋಲಿಬಾರ್ನಲ್ಲಿ ಇಬ್ಬರು ಅಮಾಯಕರು ಮೃತಪಟ್ಟಿದ್ಧಾರೆ. ಪ್ರತಿಭಟನಾಕಾರರ ಮೇಲಿನ ಪೊಲೀಸರ ದೌರ್ಜನ್ಯದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸುವಂತೆ ಕೋರಿ ಹೈಕೋರ್ಟ್ಗೆ ಸುಳ್ಯ ತಾಲೂಕಿನ ನಿವಾಸಿಗಳಾದ ಜೆಡಿಎಸ್ ಮುಖಂಡ ಮುಹಮ್ಮದ್ ಇಕ್ಬಾಲ್ ಎಳಿಮಲೆ ಮತ್ತು ಬಿ. ಉಮರ್ ಎಂಬುವರು ಅರ್ಜಿ ಸಲ್ಲಿಸಿದರು. ಈ ಪ್ರಕರಣ ವಿಚಾರಣೆ ನಡೆಸಿದ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಮಾತ್ರವಲ್ಲದೆ ಘಟನೆಯ ಬಳಿಕ ಈವರೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಇದೇ ತಿಂಗಳು ಜನವರಿ 28ನೇ ತಾರೀಕಿನೊಳಗೆ ದಾಖಲೆ ಸಮೇತ ಮಾಹಿತಿ ನೀಡುವಂತೆ ನಿರ್ದೇಶನ ನೀಡಿದೆ. ಇದಲ್ಲದೇ ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿರುವ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ , ರಾಜ್ಯ ಪೊಲೀಸ್ ಮಹಾ ನಿರ್ದೇಶಕ, ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ|ಹರ್ಷ ಅವರಿಗೆ ನೊಟೀಸ್ ಜಾರಿಗೊಳಿಸಿ ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಫೆಬ್ರವರಿ 5.ಕ್ಕೆ ಮುಂದೂಡಿದೆ.