ಕಾಶ್ಮೀರ, ಜ 15 (Daijiworld News/ MB) : ಕಾಶ್ಮೀರದ ಡಿಎಸ್ಪಿ ದೇವೇಂದರ್ ಸಿಂಗ್ ಹಾಗೂ ಭಯೋತ್ಪಾದಕರಿಗೂ ನಂಟು ಇರುವುದು ತಿಳಿದು ಬಂದ ನಂತರ ರಾಷ್ಟ್ರಪತಿಗಳಿಂದ ಪೊಲೀಸ್ ಪದಕ ಪಡೆದಿರುವ ಡಿಎಸ್ಪಿ ದೇವೇಂದರ್ ಸಿಂಗ್ಗೆ ನೀಡಲಾಗಿದ್ದ ಪದಕವನ್ನೂ ಹಿಂಪಡೆಯುವ ಸಾಧ್ಯತೆ ಇದೆ.
ಈಗಾಗಲೇ ಗೃಹ ಸಚಿವಾಲಯಕ್ಕೆ ಜಮ್ಮು-ಕಾಶ್ಮೀರದ ಪೊಲೀಸರು ಮಾಹಿತಿ ನೀಡಿದ್ದಾರೆ. ಹಾಗೆಯೇ ದಕ್ಷಿಣ ಕಾಶ್ಮೀರದಲ್ಲಿ ನಡೆದ ಪ್ರಮುಖ ಕಾರ್ಯಾಚರಣೆಯ ಕುರಿತೂ ಮಾಹಿತಿ ನೀಡಿದ್ದಾರೆ.
2001 ರ ಸಂಸತ್ ಭವನದ ಮೇಲಿನ ಉಗ್ರದಾಳಿಯ ಪ್ರಮುಖ ಅಪರಾಧಿ ಅಫ್ಜಲ್ ಗುರು ಈ ದಾಳಿಯ ವಿಚಾರದಲ್ಲಿ ದೇವೇಂದರ್ ಸಿಂಗ್ ವಿರುದ್ಧ ಗಂಭೀರವಾದ ಆರೋಪವನ್ನು ಮಾಡಿದ್ದ. ಆದರೆ ಗುಪ್ತಚರ ಇಲಾಖೆ ಹಾಗೂ ರಾಜ್ಯ ಪೊಲೀಸರು ಅಫ್ಜಲ್ ಗುರು ಈ ದಾಳಿಯ ಕುರಿತು ಸುಳ್ಳು ಹೇಳಿಕೆ ನೀಡುತ್ತಿರುವುದಾಗಿ ಹೇಳಿ ಈ ಆರೋಪವನ್ನು ನಿರಾಕರಣೆ ಮಾಡಿದ್ದರು.
ದೇವೇಂದರ್ ಸಿಂಗ್ ತನ್ನ ನಿರ್ದೇಶನದಂತೆ ಕಾರ್ಯಾಚರಣೆ ಮಾಡದಿದ್ದಲ್ಲಿ ನನ್ನ ಕುಟುಂಬ ಸದಸ್ಯರನ್ನು ಹತ್ಯೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ. ಸಂಸತ್ ಮೇಲೆ ಭಯೋತ್ಪಾದಕ ದಾಳಿ ಮಾಡುವಂತೆ ದೇವೇಂದರ್ ಸಿಂಗ್ ನನಗೆ ನಿರ್ದೇಶನ ನೀಡಿದ್ದ ಅಷ್ಟು ಮಾತ್ರವಲ್ಲದೇ ದೆಹಲಿಯಲ್ಲಿ ಬಾಡಿಗೆ ಫ್ಲ್ಯಾಟ್ ತೆಗೆದುಕೊಂಡು, ಭಯೋತ್ಪಾದಕರಿಗೆ ಬಳಕೆ ಮಾಡಲು ಸೆಕೆಂಡ್ ಹ್ಯಾಂಡ್ ಅಂಬಾಸಿಡರ್ ಕಾರನ್ನೂ ಖರೀದಿ ಮಾಡಲು ಒತ್ತಡ ಹೇರಿದ್ದರು ಎಂದು ಅಫ್ಜಲ್ ಗುರು ಆರೋಪ ಮಾಡಿದ್ದ.
ಈಗ ಡಿಎಸ್ಪಿ ದೇವೇಂದರ್ ಸಿಂಗ್ ಉಗ್ರರೊಂದಿಗೆ ಇರುವ ಸಂದರ್ಭದಲ್ಲೇ ಸಿಕ್ಕಿಬಿದಿದ್ದು ಗುಪ್ತಚರ ಇಲಾಖೆ, ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿದೆ.