ನವದೆಹಲಿ, ಜ 15 (Daijiworld News/ MB) : ನಿರ್ಭಯಾ ಪ್ರಕರಣದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿರುವ ನಾಲ್ವರ ಪೈಕಿ ಓರ್ವ ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಕೆ ಮಾಡಿರುವ ಹಿನ್ನಲೆಯಲ್ಲಿ ಅವರನ್ನು ಜ.22ರಂದು ಗಲ್ಲಿಗೇರಿಸಲಾಗುವುದಿಲ್ಲ ಎಂದು ದೆಹಲಿ ಸರಕಾರ ಬುಧವಾರ ಹೈಕೋರ್ಟ್ಗೆ ತಿಳಿಸಿದೆ.
ಅಪರಾಧಿಗಳಾದ ವಿನಯ್ ಶರ್ಮ, ಮುಖೇಶ್ ಕುಮಾರ್, ಪವನ್ ಗುಪ್ತಾ ಹಾಗೂ ಅಕ್ಷಯ್ ಕುಮಾರ್ ಸಿಂಗ್ ಅವರನ್ನು ತಿಹಾರ್ ಜೈಲಿನಲ್ಲಿ ಜ.22ರಂದು ಬೆಳಗ್ಗೆ 7 ಗಂಟೆಗೆ ಗಲ್ಲಿಗೆ ಏರಿಸಲಾಗುವುದು ಎಂದು ದೆಹಲಿ ಹೈಕೋರ್ಟ್ ಹೇಳಿತ್ತು. ಆದರೆ ಈ ನಾಲ್ವರು ಅಪರಾಧಿಗಳ ಪೈಕಿ ಓವ್ ಆಪರಾಧಿ ಮುಖೇಶ್ ಸಿಂಗ್ ಗುರುವಾರ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾನೆ.
ಈ ಅರ್ಜಿಯು ತಿರಸ್ಕಾರಗೊಂಡರೂ ಅಪರಾಧಿಯೊಬ್ಬನಿಗೆ ಗಲ್ಲುಶಿಕ್ಷೆ ನೀಡುವುದಕ್ಕಿಂತ ಮೊದಲು 14 ದಿನಗಳ ನೋಟಿಸ್ ನೀಡಬೇಕಿದೆ. ಈ ಕ್ಷಮಾದಾನ ಅರ್ಜಿಯ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಈ ನಾಲ್ವರಿಗೆ ಜ. 22ರಂದು ಗಲ್ಲು ಶಿಕ್ಷೆ ನೀಡಲು ಸಾಧ್ಯವಿಲ್ಲ ಎಂದು ದೆಹಲಿ ಸರ್ಕಾರದ ಪರ ವಕೀಲ ರಾಹುಲ್ ಮೆಹ್ತಾ ಹೇಳಿದ್ದಾರೆ.
ಹಾಗೆಯೇ ಈ ಅಪರಾಧಿಗಳು ಕಾನೂನು ಪ್ರಕ್ರಿಯೆಯನ್ನು ಮತ್ತಷ್ಟು ವಿಲಂಬ ಮಾಡುವ ಉದ್ದೇಶದಿಂದ ಪ್ರತ್ಯೇಕವಾಗಿ ಕ್ಷಮಾದಾನ ಅರ್ಜಿ ಸಲ್ಲಿಸಲು ತೀರ್ಮಾನ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.