ಮುಂಬೈ, ಜ 15 (Daijiworld News/ MB) : ಸ್ನಾನದ ಕೊಠಡಿಯಲ್ಲಿ ಗೀಸರ್ನಿಂದ ಹೊರಸೂಸಿದ ಕಾರ್ಬನ್ ಮೊನಾಕ್ಸೈಡ್ ವಿಷ ಅನಿಲದಿಂದಾಗಿ ಆಮ್ಲಜನಕ ಮಟ್ಟ ಕುಸಿತವಾಗಿ 15 ವರ್ಷದ ಬಾಲಕಿ ಮೃತಪಟ್ಟ ಘಟನೆ ಮುಂಬೈನ ಬೊರಿವಾಲಿ ಪ್ರದೇಶದಲ್ಲಿ ಮಂಗಳವಾರ ನಡೆದಿದೆ.
ಮೃತ ಬಾಲಕಿಯನ್ನು ಧ್ರುವಿ ಗೋಹಿಲ್ ಎಂದು ಗುರುತಿಸಲಾಗಿದ್ದು ಆಕೆ ಬೊರಿವಾಲಿ ವೆಸ್ಟ್ ಫ್ಲ್ಯಾಟ್ನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸ್ನಾನ ಮಾಡಲು ಹೋಗಿ ಬಹಳಷ್ಟು ಸಮಯವಾದರೂ ಕೂಡಾ ಆಕೆ ಹೊರ ಬರದ್ದನ್ನು ಗಮನಿಸಿದ ಪೋಷಕರು ಬಾಗಿಲು ಬಡಿದಿದ್ದು ಆಕೆ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನಲೆಯಲ್ಲಿ ಬಾಗಿಲನ್ನು ಮುರಿದು ಒಳ ಹೋಗಿದ್ದಾರೆ. ಧ್ರುವಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ನೋಡಿದ ಪೋಷಕರು ಆಕೆಯನ್ನು ಎತ್ತಿದ್ದಾರೆ. ಆ ಸಂದರ್ಭದಲ್ಲಿ ಆಕೆಯ ಬಲ ಭಾಗ ಬಲ ಕಳೆದು ಕೊಂಡಿತ್ತು.
ಸ್ನಾನಗೃಹದಲ್ಲಿ ಗೀಸರ್ನಿಂದ ಹೊರಸೂಸಲ್ಪಟ್ಟ ಇಂಗಾಲದ ಮಾನಾಕ್ಸೈಡ್ ಅನ್ನು ಬಾಲಕಿ ಉಸಿರಾಡಿದ್ದು ಆಕೆ ಪ್ರಜ್ಞೆ ಕಳೆದು ಕೊಂಡಿದ್ದಳು. ಆಮ್ಲಜನಕದ ಪೂರೈಕೆ ಕಡಿಮೆಯಾಗಿ ಆಕೆಯ ಮೆದುಳಿನ ಮೇಲೆ ಪರಿಣಾಮ ಬೀರಿದ್ದು ಆಕೆಗೆ ಸೆಳೆತ ಉಂಟಾಗಿದೆ ಎಂದು ವೈದ್ಯರಾದ ವಿವೇಕ್ ಚೌರಾಸಿಯಾ ಹೇಳಿದ್ದಾರೆ.
ಬಾಲಕಿಗೆ ಈವರೆಗೂ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಜ.10 ರಂದು ಸಾವನ್ನಪ್ಪಿದ್ದು ಅಂದೇ ಬಾಲಕಿಯ ಜನುಮದಿನವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.