ಮೈಸೂರು, ಜ 15 (Daijiworld News/ MB) : ಜೆಎನ್ಯುವಿನಲ್ಲಿ ನಡೆದ ಹಿಂಸಾಚಾರ ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆ ಫ್ರೀ ಕಾಶ್ಮೀರ್ ಫಲಕ ಪ್ರದರ್ಶನ ಮಾಡಿ ವಿವಾದಕ್ಕೆ ಒಳಗಾಗಿರುವ ನಳಿನಿ ಬಾಲಕುಮಾರ್ ಪರ ವಕಾಲತ್ತು ಮಾಡದಿರಲು ಮೈಸೂರು ಜಿಲ್ಲಾ ವಕೀಲರ ಸಂಘ ನಿರ್ಧರ ಮಾಡಿದೆ.
ಈ ಕುರಿತು ವಕೀಲರ ಸಂಘ, "ದೇಶದ್ರೋಹದ ಆರೋಪ ನಳಿನಿ ಅವರ ವಿರುದ್ಧ ಇರುವ ಹಿನ್ನಲೆಯಲ್ಲಿ ಅವರ ಪರವಾಗಿ ಯಾವ ವಕೀಲರು ವಕಾಲತ್ತು ವಹಿಸದಂತೆ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಜ.8 ರಂದು ಮಾನಸಗಂಗೋತ್ರಿಯಲ್ಲಿ ಜೆಎನ್ಯು ಹಿಂಸಾಚಾರ ಖಂಡನೆ ಮಾಡಿ ನಡೆದ ಪ್ರತಿಭಟನೆಯಲ್ಲಿ ವಿವಿಯ ಹಳೇ ವಿದ್ಯಾರ್ಥಿನಿ ನಳಿನಿ ಎಂಬವರು ಫ್ರೀ ಕಾಶ್ಮೀರ ಫಲಕ ಪ್ರದರ್ಶನ ಮಾಡಿರುವ ಕುರಿತು ಜಯಲಕ್ಷ್ಮೀಪುರಂ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ನಳಿನಿ ನ್ಯಾಯಾಲಯದಿಂದ ಮಧ್ಯಂತರ ಜಾಮೀನು ಪಡೆದಿದ್ದರು, ಹಾಗೆಯೇ ಪೊಲೀಸರು ಎದುರು ಹಾಜರಾಗಿ ತಮ್ಮ ಹೇಳಿಕೆಯನ್ನೂ ದಾಖಲು ಮಾಡಿದ್ದರು.
ನಳಿನಿ ಮೇಲೆ ದೇಶದ್ರೋಹದ ಆರೋಪ ಇರುವ ಹಿನ್ನಲೆಯಲ್ಲಿ ಮೈಸೂರು ವಕೀಲರ ಸಂಘ, ಮೈಸೂರು ನಗರ ವಕೀಲರ ವಿವಧೋದ್ದೇಶ ಸಹಕಾರ ಸಂಘ ಸಭೆ ನಡೆಸಿ ವಕಾಲತ್ತು ವಹಿಸದಂತೆ ತೀರ್ಮಾನ ಕೈಗೊಂಡಿದೆ ಎಂದು ಮೈಸೂರು ನಗರ ವಕೀಲರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಆನಂದ್ ತಿಳಿಸಿದ್ದಾರೆ.
ಹಾಗೆಯೇ ನಳಿನಿಗೆ ಮಧ್ಯಂತರ ಜಾಮೀನು ಕೊಡಿಸಿದ್ದ ವಕೀಲ ಪೃಥ್ವಿ ಕಿರಣ ಶೆಟ್ಟಿ ಅವರು ಕೂಡ ಮುಂದೆ ನಳಿನಿ ಪರ ವಕಾಲತ್ತು ಮಾಡದಂತೆ ನಿರ್ಧಾರ ಮಾಡಿದ್ದಾರೆ ಎಂದು ಮೈಸೂರು ವಕೀಲರ ಸಂಘದ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ.