ಶ್ರೀನಗರ, ಜ 16 (Daijiworld News/MB) : ಕಾಶ್ಮೀರದಲ್ಲಿ 24 ಗಂಟೆಗಳ ಕಾಲ ಹಿಮಪಾತವಾದ್ದರಿಂದ ಮೂವರು ಯೋಧರು ಸೇರಿದಂತೆ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದು ಆದರೆ ಈ ಭಾರೀ ಹಿಮಪಾತದಿಂದಾಗಿ 50ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಹಿಮಪಾತದಿಂದಾಗಿ 50ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲು ಹಾಗೂ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಪುನರ್ ಆರಂಭ ಮಾಡುವ ಸಲುವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಹಾಗೆಯೇ ಈ ಭಾರೀ ಹಿಮಪಾತ ಹಾಗೂ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು ಹಲವು ಜನರು ಸಿಲುಕಿಕೊಂಡಿದ್ದಾರೆ, ಹಲವರು ಸಾವನ್ನಪ್ಪಿದ್ದು ಹಲವರು ನಾಪತ್ತೆಯಾಗಿದ್ದಾರೆ ರಕ್ಷಣಾ ಕಾರ್ಯ ಮುಂದುವರೆದಿದೆ ಎಂದು ಪಾಕ್ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಕಾಶ್ಮೀರ ಕಣಿವೆಯ ಬಯಲು, ಮೇಲ್ಭಾಗದ ಪ್ರದೇಶ ಹಾಗೂ ಪಾಕ್ ಆಕ್ರಮಿತ ಕಾಶ್ಮೀರಲ್ಲಿ ಭಾನುವಾರ, ಸೋಮವಾರ ಭಾರೀ ಹಿಮಪಾತವಾಗಿದ್ದು, ಈ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿತ್ತು.