ಕಟಕ್, ಜ.16 (Daijiworld News/PY) : ಮುಂಬೈನಿಂದ ಭುವನೇಶ್ವರಕ್ಕೆ ತೆರಳುತ್ತಿದ್ದ ಲೋಕಮಾನ್ಯ ತಿಲಕ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ ಸುಮಾರು 20ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಗುರುವಾರ ಮುಂಜಾನೆ ಕಟಕ್ ಸಮೀಪ ನಡೆದಿದೆ.
ಒಡಿಶಾ ರಾಜ್ಯದ ಕಟಕ್ ಸಮೀಪದಲ್ಲಿನ ಸಾಲಗಾವ್ ಹಾಗೂ ನೀರ್ಗುಂಡಿ ಮಧ್ಯಭಾಗದಲ್ಲಿ ಈ ಘಟನೆ ಸಂಭವಿಸಿದ್ದು, ಸುಮಾರು 8 ಬೋಗಿಗಳು ಹಳಿ ತಪ್ಪಿದೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಸುಮಾರು 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಇದರಲ್ಲಿ 6 ಜನರ ಸ್ಥಿತಿ ಗಂಭೀರವಾಗಿದೆ ಎಂದು ವರದಿ ತಿಳಿಸಿದೆ.
ಸ್ಥಳದಲ್ಲಿ ಮಂಜು ಕವಿದಿದ್ದು ಇದರಿಂದಾಗಿ ಲೋಕಮಾನ್ಯ ತಿಲಕ್ ಎಕ್ಸ್ ಪ್ರೆಸ್ ರೈಲು, ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.
ಅಪಘಾತದಿಂದಾಗಿ 5 ಬೋಗಿಗಳು ಸಂಪೂರ್ಣ ಹಳಿತಪ್ಪಿದ್ದು, ಉಳಿದ 3 ಬೋಗಿಗಳು ಭಾಗಶಃ ಹಳಿಯಲ್ಲಿವೆ ಎನ್ನಲಾಗಿದೆ.
ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಕ್ಷಣಾ ಕಾರ್ಯ ಪ್ರಾರಂಭಿಸಿದ್ದಾರೆ.