ನವದೆಹಲಿ, ಜ.16 (Daijiworld News/PY) : "ಲಕ್ಷ್ಮೀ ದೇವಿಯ ಚಿತ್ರವನ್ನು ನೋಟುಗಳ ಮೇಲೆ ಮುದ್ರಿಸಿದರೆ ರೂಪಾಯಿ ಮೌಲ್ಯ ಅಧಿಕವಾಗಿ, ಭಾರತದ ಆರ್ಥಿಕತೆಯೂ ಸುಧಾರಿಸಲಿದೆ" ಎಂದು ಬಿಜೆಪಿ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಮಧ್ಯಪ್ರದೇಶದ ಖಾಂಡ್ವಾದಲ್ಲಿ ಮಾತನಾಡಿದ ಸುಬ್ರಮಣಿಯನ್ ಸ್ವಾಮಿ ಅವರು ಇಂಡೋನೇಷ್ಯಾದ ನೋಟುಗಳ ಮೇಲೆ ಗಣಪತಿಯ ಚಿತ್ರವನ್ನು ಮುದ್ರಿಸಿರುವ ಬಗ್ಗೆ ಹೇಳುತ್ತಾ, "ನಮ್ಮ ಎಲ್ಲಾ ತೊಂದರೆಗಳನ್ನು ನಿವಾರಿಸುವವನು ಗಣೇಶ. ನಮ್ಮ ದೇಶದಲ್ಲೂ ಲಕ್ಷ್ಮೀ ದೇವಿಯ ಫೋಟೋವನ್ನು ನೋಟುಗಳ ಮೇಲೆ ಮುದ್ರಿಸಿದರೆ ರೂಪಾಯಿಯ ಮೌಲ್ಯ ಹಾಗೂ ಭಾರತದ ಆರ್ಥಿಕತೆಯೂ ಸುಧಾರಿಸುತ್ತದೆ. ಈ ತೀರ್ಮಾನಕ್ಕೆ ಪ್ರಧಾನಿಯವರು ಒಪ್ಪಿದರೆ ನಾನು ಅವರಿಗೆ ಬೆಂಬಲವಾಗಿರುತ್ತೇನೆ" ಎಂದು ಹೇಳಿದರು.
"70 ವರ್ಷಗಳಲ್ಲಿ ಸಾಧ್ಯವಾಗದೇ ಇದ್ದಂತಹ ಕಾಯ್ದೆ ಜಾರಿಯನ್ನು ಸುಪ್ರೀಂ ಕೋರ್ಟ್ ಹಾಗೂ ಸಂವಿಧಾನದ 44ನೇ ಪರಿಚ್ಚೇದದ ಮೂಲಕ ಬಿಜೆಪಿ ಶೀಘ್ರದಲ್ಲೇ ಏಕರೂಪ ಸಿವಿಲ್ ಕೋಡ್ ಅನ್ನು ಪರಿಚಯಿಸಲಿದೆ. 2025ರ ವೇಳೆ ಭಾರತವು ಚೀನಾವನ್ನು ಹಿಂದಿಕ್ಕಿ ಅತೀ ಹೆಚ್ಚು ಜನಸಂಖ್ಯೆ ಹೊಂದಿದ ದೇಶ ಎನಿಸಿಕೊಳ್ಳಲಿದೆ" ಎಂದು ತಿಳಿಸಿದರು.