ನವದೆಹಲಿ, ಜ 16(Daijiworld News/MSP): ವಾಟರ್ ಪ್ಯೂರಿಫೈಯರ್ ಬಳಕೆಯನ್ನು ನಿರ್ಬಂಧಿಸಿ 2 ತಿಂಗಳ ಒಳಗೆ ಅಧಿಸೂಚನೆ ಜಾರಿಗೊಳಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯೂ, ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ.
ಆರ್.ಓ ತಂತ್ರಜ್ಞಾನದ ವಾಟರ್ ಪ್ಯೂರಿಫೈಯರ್ ಅತಿ ಹೆಚ್ಚಾಗಿ ವಾಣಿಜ್ಯೀಕರಣಗೊಂಡಿದೆ. ಮಾತ್ರವಲ್ಲದೇ ಅಗತ್ಯವಿಲ್ಲದ ಕಡೆಯಲ್ಲೂ ಇದರ ಬಳಕೆ ಅತಿ ಹೆಚ್ಚಾಗಿ ಆಗುತ್ತಿದೆ. ವಾಟರ್ ಪ್ಯೂರಿಫೈಯರ್ ’ ಯಂತ್ರಗಳಲ್ಲಿ ನೀರು ಶುದ್ಧೀಕರಣದ ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ನೀರು ಪೋಲಾಗುತ್ತಿರುವ ಕಾರಣ ಇದು ಮುಂದಿನ ದೀರ್ಘಾವಧಿಯಲ್ಲಿ ಪರಿಸರಕ್ಕೆ ಮಾರಕವಾಗಿದೆ. ಹೀಗಾಗಿ ಇವುಗಳನ್ನು ನಿಯಂತ್ರಿಸಬೇಕೆಂದು ’ಫ್ರೆಂಡ್ಸ್ ’ಎನ್ ಜಿ ಒ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹಸಿರು ನ್ಯಾಯಮಂಡಳಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ನೀರು ಶುದ್ಧೀಕರಣದ ಯಂತ್ರಗಳಲ್ಲಿ ನೀರು ಪೋಲು ಮಾತ್ರವಲ್ಲದೇ ನೀರಿನಲ್ಲಿರಬೇಕಾದ ಅಗತ್ಯ ಕಣಿಜ ಅಂಶಗಳು ನಾಶವಾಗುತ್ತಿರುವ ಬಗ್ಗೆಯೂ ಎನ್ ಜಿ ಟಿ ಆಕ್ಷೇಪ ವ್ಯಕ್ತಪಡಿಸಿದೆ.
ಅಗತ್ಯ ಕಣಿಜ ಅಂಶಗಳು ಇಲ್ಲ ಅತಿ ಸಂಸ್ಕರಿತ ನೀರು ಆರೋಗ್ಯಕ್ಕೂ ಒಳ್ಳೆಯದಲ್ಲ. ಡಬ್ಲ್ಯು ಹೆಚ್ ಮಾನದಂಡದಂತೆ ಒಂದು ಲೀಟರ್ ನೀರಿನಲ್ಲಿ ಟಿಡಿಎಸ್ ೩೦೦ ಮಿ.ಗ್ರಾಂ ಇದ್ದರೆ ಅತ್ಯುತ್ತಮವಾಗಿದೆ.
ಒಂದು ಲೀಟರ್ ನೀರಿನಲ್ಲಿ ಟಿಡಿಎಸ್ 500 ಮಿ.ಗ್ರಾಂ ಗಿಂತಲೂ ಕಡಿಮೆ ಇದ್ದರೆ ಆರ್ ಓ ಗಳ ಬಳಕೆ ನಿಷೇಧಿಸಬೇಕು ಎಂದು ಎನ್ ಜಿ ಟಿ ಕಳೆದ ನವೆಂಬರ್ ನಲ್ಲಿಯೇ ಆದೇಶ ನೀಡಿತ್ತು.
ಈ ಬಗ್ಗೆ ಕರಡು ಸಿದ್ದಪಡಿಸಲು ನಾಲ್ಕು ತಿಂಗಳು ಅವಕಾಶ ಬೇಕು ಎಂದ ಪರಿಸರ ಸಚಿವಾಲಯದ ವಿರುದ್ದ ಗರಂ ಆದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ, ನೆಪ ಹೇಳಬೇಡಿ 2 ತಿಂಗಳ ಒಳಗೆ ಅಧಿಸೂಚನೆ ಸಿದ್ದಪಡಿಸದ ಅಧಿಕಾರಿಗಳಿದ್ದರೆ ಜ.೧ ರಿಂದಲೇ ಅನ್ವಯವಾಗುವಂತೆ ಸಂಬಳ ತಡೆಹಿಡಿಯಿರಿ ಎಂದು ಆದೇಶಿಸಿದೆ.