ನವದೆಹಲಿ, ಜ 16(Daijiworld News/MSP): 'ಕುಂದಾಪುರ ವಾಮನ ಕಾಮತ್' ಅವರು ದೇಶದ ಆರ್ಥಿಕತೆ ಪುನಶ್ಚೇತನಕ್ಕೆ ಟಾನಿಕ್ ಆಗಿ ಬರ್ತಾರಾ? ಹೌದು, ಭಾರತದ ಆರ್ಥಿಕ ವ್ಯವಸ್ಥೆಯ ಬಿಕ್ಕಟ್ಟನ್ನು ಎದುರಿಸಿ ಚೇತರಿಕೆ ಮಾರ್ಗ ಕಂಡುಕೊಳ್ಳುವ ಸಲುವಾಗಿ ಕೇಂದ್ರ ಪ್ರಯತ್ನಿಸುತ್ತಿರುವಾಗ ಫೆ.1 ರ ಬಜೆಟ್ ನಂತರ ಬ್ರಿಕ್ಸ್ ಬ್ಯಾಂಕ್ನ ಅಧ್ಯಕ್ಷರಾಗಿರುವ ಮಂಗಳೂರು ಮೂಲದ ಕೆ.ವಿ ಕಾಮತ್ ಕೇಂದ್ರ ಹಣಕಾಸು ಸಚಿವರಾಗಿ ಮೋದಿ ಸಂಪುಟ ಸೇರುವ ವದಂತಿ ದಟ್ಟವಾಗತೊಡಗಿದೆ.
ಹಣಕಾಸು ಕ್ಷೇತ್ರದಲ್ಲಿ ಅಪಾರ ಪರಿಣಿತಿ ಹೊಂದಿರುವ ಕೆ.ವಿ ಕಾಮತ್ ಅವರು ಬ್ರಿಕ್ಸ್ ಬ್ಯಾಂಕ್ನ ಮುಖ್ಯಸ್ಥರಾಗಿದ್ದಾರೆ. ಹಣಕಾಸು ಪ್ರಪಂಚದ ಜಗತ್ತಿನ ಆಗುಹೋಗುಗಳನ್ನು ನಿರ್ವಹಿಸಿದ ಸುದೀರ್ಘ ಅನುಭವಿ ಇವರು. ರಾಜಕಾರಣಿಯೇತರ ವ್ಯಕ್ತಿಯಾಗಿರುವ ಇವರನ್ನು ಹಣಕಾಸು ಸಚಿವರನ್ನಾಗಿಸಿ, ಆರ್ಥಿಕ ಬಿಕ್ಕಟ್ಟಿನ ಸವಾಲನ್ನು ಎದುರಿಸಲು ಕೇಂದ್ರ ಚಿಂತನೆ ನಡೆಸಿದೆ ಎನ್ನಲಾಗಿದೆ.
ಒಂದು ವೇಳೆ ಕೆ.ವಿ ಕಾಮತ್ ವಿತ್ತ ಸಚಿವರಾದ್ರೆ ಮಹತ್ವದ ಬದಲಾವಣೆ ಸಂಭವಿಸಿದಂತಗಲಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗುವ ನಿರೀಕ್ಷೆ ಇದೆ.
೭೨ ವರ್ಷದ ಕೆ.ವಿ ಕಾಮತ್ ಈ ಹಿಂದೆ ಇನ್ಫೋಸಿಸ್ನ ಅಧ್ಯಕ್ಷರಾಗಿದ್ದು,ಅದಕ್ಕೂ ಮೊದಲು ಖಾಸಗಿ ರಂಗದ ಐಸಿಐಸಿಐ ಬ್ಯಾಂಕ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಕಾಮತ್ರವರು ಹ್ಯೂಸ್ಟನ್ ಮೂಲದ ತೈಲ ಕಂಪನಿ ಶ್ಲುಮ್ಬರ್ಗರ್ ಮತ್ತು ಭಾರತೀಯ ಔಷಧ ಉದ್ಯಮ ಲುಪಿನ್ಇದರ ಸ್ವತಂತ್ರ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿದೆ. ಪಂಡಿತ್ ದೀನದಯಾಳ್ ಉಪಾಧ್ಯಾಯ ಪೆಂಟ್ರೋಲಿಯಮ್ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರೂ ಹೌದು.
ಡಿ. 2 1947ರಂದು ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಮಂಗಳೂರಿನಲ್ಲಿ ಜನಿಸಿದ ಇವರು ಬಾಲ್ಯದ ಬಹುಭಾಗವನ್ನು ಇಲ್ಲಿಯೇ ಕಳೆದಿದ್ದರು. ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಾಥಮಿಕ ಹಾಗೂ ಪಿಯುಸಿ ಶಿಕ್ಷಣವನ್ನು ಪಡೆದ ಇವರು ಮೆಕಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಸುರತ್ಕಲ್ ನ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾನಿಲಯದಿಂದ ಪಡೆದರು. ಮುಂದೆ ಭಾರತೀಯ ವ್ಯವಸ್ಥಾಪನಾ ಸಂಸ್ಥೆ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ ಮೆನೇಜ್ಮೆಂಟ್) ಅಹಮದ್ಬಾದ್ನಲ್ಲಿ ವ್ಯವಸ್ಥಾಪನಾ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲಮೋವನ್ನು ಪಡೆದುಕೊಂಡರು.