ಬೆಂಗಳೂರು, ಜ.16 (Daijiworld News/PY) : ಜ.16 ಗುರುವಾರದಂದು ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಔಪಚಾರಿಕ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಅವಿರೋಧವಾಗಿ ಆಯ್ಕೆಯಾಗಿದ್ದು, ರಾಜ್ಯಾಧ್ಯಕ್ಷ ಚುನಾವಣಾ ವೀಕ್ಷಕರಾಗಿದ್ದ ಸಚಿವ ಸಿ.ಟಿ ರವಿ ಅವರು ನಳಿನ್ ಕುಮಾರ್ ಕಟೀಲ್ಗೆ ಪಕ್ಷದ ಧ್ವಜ ಹಸ್ತಾಂತರ ಮಾಡಿ ಅಧಿಕೃತ ಘೋಷಣೆ ಮಾಡಿದ್ದಾರೆ.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್ ಅವರು, "ಅಧ್ಯಕ್ಷನಾಗಿ ಆಯ್ಕೆಯಾಗುವ ಸಂದರ್ಭ ಕೆಲವು ಸವಾಲುಗಳಿದ್ದವು. ರಾಜ್ಯಾದ್ಯಂತ ಪ್ರವಾಸ ಮಾಡಿ ಎಲ್ಲಾ ಕಾರ್ಯಕರ್ತರ ವಿಶ್ವಾಸ ಪಡೆದುಕೊಂಡಿದ್ದೇನೆ. ಸ್ಥಳೀಯ ಸಂಸ್ಥೆಯ ಚುನಾವಣೆ ಸೇರಿದಂತೆ ಬಿಬಿಎಂಪಿ ಮೇಯರ್ ಚುನಾವಣೆ ಹಾಗೂ ಉಪಚುನಾವಣೆಯಲ್ಲಿ ಯಶಸ್ಸು ಗಳಿಸಿದ್ದೇವೆ" ಎಂದು ಹೇಳಿದರು.
ಬಳಿಕ ಮಾತನಾಡಿದ ಸಿ.ಟಿ ರವಿ, "ನಾನು ಚುನಾವಣೆ ವೀಕ್ಷಕನಾಗಿದ್ದೆ. ಆ ವೇಳೆ ಮಾಜಿ ಎಂಎಲ್ ಸಿ ಅಶ್ವಥ್ ನಾರಾಯಣ ಚುನಾವಣಾಧಿಕಾರಿ ಆಗಿದ್ದರು. ಈಗಾಗಲೇ ರಾಜ್ಯ ಬಿಜೆಪಿಯ 20 ಮಂದಿ ಜಿಲ್ಲಾಧ್ಯಕ್ಷರ ನೇಮಕವಾಗಿದೆ. ರಾಜ್ಯಾಧ್ಯಕ್ಷ ಹುದ್ದೆಗೂ ಚುನಾವಣೆ ನಡೆಸಬಹುದು ಎಂದು ರಾಷ್ಟ್ರೀಯ ಚುನಾವಣಾಧಿಕಾರಿಗಳು ಹೇಳಿದ್ದರು. ಹಾಗಾಗಿ ನಾವು ರಾಜ್ಯಾಧ್ಯಕ್ಷ ಹುದ್ದೆ ಚುನಾವಣೆ ನಡೆಸಿದ್ದೇವೆ. ರಾಜ್ಯಾಧ್ಯಕ್ಷ ಹುದ್ದೆಗೆ ಬಿಜೆಪಿ ಸಕ್ರಿಯ ಸದಸ್ಯರು ನಾಮಪತ್ರ ಸಲ್ಲಿಸಬಹುದಿತ್ತು. ಆದರೆ, ಈ ಹುದ್ದೆಗೆ ಒಂದೇ ನಾಮಪತ್ರ ಸಲ್ಲಿಕೆಯಾಗಿತ್ತು. ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರ ಪರಿಶೀಲಿಸಿದ್ದು, ಅದರಂತೆಯೇ ಈಗ ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ" ಎಂದು ಹೇಳಿದರು.