ಹೈದರಾಬಾದ್, ಜ 16(Daijiworld News/MSP): ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಎಐಎಂಐಎ ಮುಖ್ಯಸ್ಥ ಅಸಾದುದ್ದೀನ್ ಓವೈಸಿ , 'ಮೊದಲು ಭಾರತದಲ್ಲಿರುವ ಅಲ್ಪಸಂಖ್ಯಾತರು ಹಾಗೂ ದಲಿತರನ್ನು ಮೊದಲು ರಕ್ಷಣೆ ಮಾಡಿ' ಎಂದು ಹೇಳಿದ್ದಾರೆ.
ಹೈದರಾಬಾದ್ ನ ಪೆದ್ದಪಲ್ಲಿಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಸಾದುದ್ದೀನ್ ಓವೈಸಿ, 'ಕೇಂದ್ರ ಸರ್ಕಾರ ನೆರೆ ರಾಷ್ಚ್ರದ ವಲಸಿಗರ ಬಗ್ಗೆ ತಲೆಕೆಡಿಸಿಕೊಂಡಿದೆ. ಆದರೆ ಭಾರತದ ಒಳಗಿರುವ ಅಲ್ಪಸಂಖ್ಯಾತರು ಹಾಗೂ ದಲಿತರನ್ನು ರಕ್ಷಣೆ ಮಾಡಬೇಕಾದ ಹೊಣೆ ಕೇಂದ್ರದ ಮೇಲಿದೆ' ಎಂದರು.
'ಸಿಎಎ ಯೂ ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನದ ಮನೋಭಾವಕ್ಕೆ ವಿರುದ್ಧವಾಗಿತ್ತು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಮತದಾನ ಮೂಲಕ ಆಯ್ಕೆ ಮಾಡಿದ್ದು ಭಾರತೀಯರು ವಿನಾಃ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಜನರಲ್ಲ ಎನ್ನುವುದು ತಿಳಿದಿರಲಿ. ಪೌರತ್ವ ತಿದ್ದುಪಡಿ ಕಾಯ್ದೆ ಅಲ್ಪಸಂಖ್ಯಾತರ ವಿರುದ್ಧ ಇಲ್ಲವೆಂದು ಪ್ರಧಾನಿ ಮೋದಿ ಹೇಳಿತ್ತಾರೆ. ಸಿಎಎ ಕೇವಲ ಮುಸ್ಲಿಂ ಸಮುದಾಯ ಮಾತ್ರವಲ್ಲ ದಲಿತರ ವಿರುದ್ಧವಾಗಿಯೂ ಇದೆ. ಧರ್ಮದ ಗೆರೆ ಎಳೆದು ಜನರನ್ನು ಇಬ್ಭಾಗ ಮಾಡುವುದು ಎಷ್ಟು ಸರಿ' ಎಂದು ಪ್ರಶ್ನಿಸಿದ್ದಾರೆ.