ದೆಹಲಿ, ಜ.16 (Daijiworld News/PY) : "ಭಯೋತ್ಪಾದನೆಗೆ ಪ್ರೋತ್ಸಾಹ ನೀಡಿ, ಅವರಿಗೆ ಶಸ್ತ್ರಗಳನ್ನು ಮತ್ತು ಹಣಕಾಸು ನೆರವು ಒದಗಿಸುವ ಮೂಲಕ ಅವರನ್ನು ಮುಸುಕಿನ ಯುದ್ಧದ ದಾಳಗಳಂತೆ ಮಾಡಿಕೊಳ್ಳುವ ದೇಶಗಳು ಇರುವವರೆಗೆ ಭಯೋತ್ಪಾದನೆ ಇದ್ದೇ ಇರುತ್ತದೆ. ಅಂಥ ದೇಶಗಳಿಗೆ ಪಾಠ ಕಲಿಸದೇ ಭಯೋತ್ಪಾದನೆಯನ್ನು ತಡೆಯೊಡ್ಡಲು ಸಾಧ್ಯವಿಲ್ಲ" ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಸೇನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಪಿನ್ ರಾವತ್, "ಭಯೋತ್ಪಾದಕರನ್ನು ಪ್ರೋತ್ರಾಹಿಸುವಂತ ದೇಶಗಳು ಇರುವವರೆಗೆ ಭಯೋತ್ಪಾದನೆ ಇದ್ದೇ ಇರುತ್ತದೆ. ವಿಶ್ವ ವಾಣಿಜ್ಯ ಸಂಸ್ಥೆಯ ಮೇಲಿನ ದಾಳಿಯ ನಂತರ ಅಮೆರಿಕ ಪ್ರತಿಕ್ರಿಯಿಸಿದಂತೆ ಪ್ರತಿಕ್ರಿಯಿಸಿದರೆ ಭಯೋತ್ಪಾದನೆಯನ್ನು ಕೊನೆಗಾಣಿಸಬಹುದು" ಎಂದು ಹೇಳಿರುವುದಾಗಿ ವರದಿ ತಿಳಿಸಿದೆ.
"ನಾವು ಭಯೋತ್ಪಾದನೆಯನ್ನು ಮಟ್ಟ ಹಾಕಲೇಬೇಕು. ಭಯೋತ್ಪಾದಕರನ್ನು ಯಾರೇ ಪ್ರೋತ್ಸಾಹಿಸುತ್ತಿದ್ದರೂ ಅವರನ್ನು ಗುರಿಯಾಗಿಸಬೇಕು" ಎಂದರು.