ಬೆಂಗಳೂರು,ಜ 16(Daijiworld News/MSP): ಭಾರತದ ಹಲವು ಪ್ರಮುಖ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಯಲ್ಲಿದ್ದು, ರಾಜ್ಯದಲ್ಲಿಯೂ ಎಲ್ಲಾ ಪ್ರಮುಖ ದೇವಾಲಯಗಳಲ್ಲೂ ವಸ್ತ್ರ ಸಂಹಿತೆ ಜಾರಿಗೆ ತರುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ದೇವಾಲಯಗಳಲ್ಲಿನ ಶಿಷ್ಟಾಚಾರ ಹಾಗೂ ಸಂಪ್ರದಾಯಗಳನ್ನು ಪಾಲಿಸುವ ಉದ್ದೇಶದಿಂದ ವಸ್ತ್ರ ಸಂಹಿತೆ ನಿಯಮ ಜಾರಿಗೆ ತರುವ ಬಗ್ಗೆ ಚಿಂತಿಸಲಾಗಿದ್ದು, ಈ ಬಗ್ಗೆ ಅನೇಕ ಪ್ರಸ್ತಾಪಗಳು ಬಂದಿದೆ. ಜ 20 ಮತ್ತು 21 ರಂದು ಧಾರ್ಮಿಕ ಪರಿಷತ್ ಸಭೆ ಇದ್ದೂ ಈ ಸಭೆಯಲ್ಲಿ ಭಕ್ತಾದಿಗಳಿಗೆ ವಸ್ತ್ರ ಸಂಹಿತೆ ಜಾರಿ ತರುವ ಬಗ್ಗೆ ಚರ್ಚಿಸಿ ತೀರ್ಮಾನಿಸುತ್ತೇವೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳ ಅಭಿಪ್ರಾಯವನ್ನು ಪಡೆಯಲಾಗುವುದು ಎಂದು ಸಚಿವ ಕೋಟಾ ತಿಳಿಸಿದ್ದಾರೆ.
ಕೇರಳ ಗುರುವಾಯೂರು ದೇವಾಲಯ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ದೇವಾಲಯಗಳಲ್ಲಿ ಭಕ್ತರು ಸಂಪ್ರಾದಾಯಿಕ ಧಿರಿಸು ಧರಿಸುವುದು ಕಡ್ಡಾಯವಾಗಿದೆ. ಕೆಲ ದಿನಗಳ ಹಿಂದೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿಯೂ ವಸ್ತ್ರ ಸಂಹಿತೆ ಅನುಸರಿಸುವುದ ಕಡ್ಡಾಯ ಎಂಬ ನಿಯಮ ಜಾರಿಗೆ ಬರಲಾಗಿದೆ. ಜೀನ್ಸ್ ಧರಿಸಿದವರಿಗೆ ವಿಶ್ವನಾಥನ ಸ್ಪರ್ಶ ಪೂಜೆಗೆ ಅವಕಾಶವಿಲ್ಲ ಎಂಬ ನಿಯಮ ಜಾರಿಗೆ ತರಲಾಗಿದೆ.
ವಸ್ತ್ರ ಸಂಹಿತೆ ನಿಯಮ ರಾಜ್ಯದಲ್ಲೂ ಜಾರಿಗೆ ತರಬೇಕು ಎಂದು ವಿಎಚ್ಪಿ, ಬಜರಂಗದಳ ಹಾಗೂ ಇತರ ಹಿಂದೂ ಸಂಘಟನೆಗಳು ಈ ಹಿಂದೆ ಹಲವಾರು ಬಾರಿ ಒತ್ತಾಯಿಸಿತ್ತು.
ಹಲವು ಸಂಘ ಸಂಸ್ಥೆಗಳಿಂದ ಒತ್ತಡ ಬಂದಿದ್ದು, ಪರಿಶೀಲನೆ ನಡೆಸಿ ಚರ್ಚಿಸಿ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಚಿವರು ಮಾಧ್ಯಮಗಳಿಗೆ ತಿಳಿದ್ದಾರೆ.