ಉತ್ತರ ಪ್ರದೇಶ, ಜ 16 (Daijiworld News/MB) : ತನ್ನ ಗರ್ಭಿಣಿ ಪತ್ನಿಯನ್ನು ಪತಿ ಹತ್ಯೆ ಮಾಡಿ ದೇಹದ ಭಾಗಗಳನ್ನು ಹಿಟ್ಟಿನ ಗಿರಣಿಯಲ್ಲಿ ಪುಡಿ ಮಾಡಿದ ಅಮಾನುಷ ಘಟನೆ ಉತ್ತರಪ್ರದೇಶದ ರೇ ಬರೇಲಿಯಲ್ಲಿ ನಡೆದಿದ್ದು ಆರೋಪಿ ಪತಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಬಂಧಿತ ಆರೋಪಿ ರವೀಂದ್ರ ಕುಮಾರ್(35) ಹಾಗೂ ಊರ್ಮಿಳ(27) ದಂಪತಿಗಳು 2011ರಲ್ಲಿ ವಿವಾಹವಾಗಿದ್ದು ಇವರಿಗೆ ಈಗಾಗಲೇ ಏಳು ಮತ್ತು ಹನ್ನೊಂದು ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಗರ್ಭಿಣಿಯಾಗಿದ್ದ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಬಹುದು ಎಂಬ ಕಾರಣಕ್ಕೆ ಆಕೆಯನ್ನು ಪತಿ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಹತ್ಯೆ ಜ.4ರಂದು ನಡೆದಿದ್ದು ತನ್ನ ತಂದೆ, ತಾಯಿಯನ್ನು ಹತ್ಯೆ ಮಾಡಿರುವುದನ್ನು ನೋಡಿದ ಹಿರಿಯ ಪುತ್ರಿ ಈ ವಿಷಯವನ್ನು ಮಂಗಳವಾರ ತನ್ನ ಅಜ್ಜಿಯ ಮನೆಯಲ್ಲಿ ತಿಳಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಹಾಗೆಯೇ ರವೀಂದ್ರ ಕುಮಾರ್ನ ಹಿರಿಯ ಪುತ್ರಿ ಈ ಹತ್ಯೆಯಲ್ಲಿ ತನ್ನ ಅಜ್ಜ ಕರಮ್ ಚಂದ್ರ ಮತ್ತು ಚಿಕ್ಕಪ್ಪರಾದ ಸಂಜೀವ್ ಮತ್ತು ಬ್ರಿಜೇಶ್ ಕೂಡ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದು ಪೊಲೀಸರು ಅವರನ್ನು ಕೂಡಾ ಬಂಧನ ಮಾಡಿದ್ದಾರೆ. ಮೃತ ದೇಹದ ಅವಶೇಷವನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ.
ಮೃತ ಮಹಿಳೆಯ ಕುಟುಂಬ ದೂರು ನೀಡಿದ ನಂತರ ನಮ್ಮ ತಂಡವು ರವೀಂದ್ರ ಕುಮಾರ್ ಮನೆಗೆ ಹೋಗಿ ಪರಿಶೀಲನೆ ನಡೆಸಿದ್ದು ಅಲ್ಲಿ ಮಹಿಳೆಯ ದೇಹ ದೊರಕಿಲ್ಲ. ಈ ಕುರಿತು ರವೀಂದ್ರ ಕುಮಾರ್ನನ್ನು ವಿಚಾರಣೆ ನಡೆಸಿದಾಗ ಪತ್ನಿಯ ಜೊತೆ ವಾಗ್ವಾದ ನಡೆದ ಸಂದರ್ಭದಲ್ಲಿ ಕುಪಿತಗೊಂಡು ಆಕೆಯ ಕತ್ತು ಹಿಸುಕಿ ಹತ್ಯೆ ಮಾಡಿ, ದೇಹವನ್ನು ತುಂಡುತುಂಡಾಗಿ ಕತ್ತರಿಸಿ ಹಿಟ್ಟಿನ ಗಿರಣಿಯಲ್ಲಿ ಹಾಕಿ ಹುಡಿ ಮಾಡಿ ನಂತರ ಅವಶೇಷವನ್ನು ಗೋಣಿಚೀಲದಲ್ಲಿ ತುಂಬಿಸಿ 4 ಕಿ.ಮೀ. ದೂರದಲ್ಲಿರುವ ಪೊದೆಗೆ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ವಿನೀತ್ ಸಿಂಗ್ ತಿಳಿಸಿದ್ದಾರೆ.
ರವೀಂದ್ರ ಕುಮಾರ್ ಜ4 ರಂದು ಉತ್ತರಪ್ರದೇಶದ ಪೊಲೀಸ್ ನಂಬರ್ ಕರೆ ಮಾಡಿ ಊರ್ಮಿಳಾ ಕಾಣೆಯಾಗಿದ್ದಾಳೆ ಎಂದು ತಿಳಿಸಿದ್ದ ಎಂದು ಅಧಿಕಾರಿ ಹೇಳಿದ್ದಾರೆ.