ನವದೆಹಲಿ, ಜ.16 (Daijiworld News/PY) : ನಿರ್ಭಯಾ ಪ್ರಕರಣದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಅಪರಾಧಿ ಮುಖೇಶ್ ಸಲ್ಲಿಸಿದ್ದ ಕ್ಷಮಾಧಾನ ಅರ್ಜಿ ಹಿನ್ನೆಲೆ ಜ.22ರಂದು ಬೆಳಗ್ಗೆ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸದಂತೆ ದೆಹಲಿ ಹೈಕೋರ್ಟ್ ಗುರುವಾರ ತಡೆ ನೀಡಿದೆ ಎಂದು ವರದಿ ತಿಳಿಸಿದೆ.
ದೆಹಲಿಯ ತೀಸ್ ಹಜಾರಿ ಕೋರ್ಟ್ ನ್ಯಾಯಾಧೀಶರು ಪ್ರಕರಣದ ವಿಚಾರಣೆ ನಡೆಸಿದ್ದು, ಅಪರಾಧಿಗಳ ವಿರುದ್ದ ಹೊರಡಿಸಲಾಗಿರುವ ಡೆತ್ ವಾರಂಟ್ ಆದೇಶದ ವಿಚಾರವಾಗಿ ನಾನು ಪುನರ್ ವಿಮರ್ಶಿಸುವುದಿಲ್ಲ. ಆದರೆ ಕ್ಷಮಾದಾನ ಅರ್ಜಿ ವಿಚಾರದ ಬಗ್ಗೆ ನಿರ್ಧಾರ ಕೈಗೊಳ್ಳುವವರೆಗೆ ಮರಣದಂಡನೆಗೆ ತಡೆ ನೀಡುವುದಾಗಿ ಹೇಳಿದರು.
ಜ.22ರ ಬೆಳಗ್ಗೆ 7ಗಂಟೆಗೆ ನಾಲ್ವರನ್ನು ಗಲ್ಲಿಗೇರಿಸುವುದಿಲ್ಲ ಎಂಬುದಾಗಿ ತಿಹಾರ್ ಜೈಲು ಅಧಿಕಾರಿಗಳು ವರದಿ ನೀಡಲಿ ಎಂದು ನ್ಯಾಯಾಧೀಶರು ನಿರ್ದೇಶನ ನೀಡಿದರು. ಹೀಗಾಗಿ ಕಳೆದ ವಾರ ದಿಲ್ಲಿ ಹೈಕೋರ್ಟ್ ಜಾರಿ ಮಾಡಿದ್ದ ಡೆತ್ ವಾರಂಟ್ಗೆ ತಾತ್ಕಾಲಿಕ ತಡೆ ನೀಡಲಾಗಿದೆ.
ನಿರ್ಭಯಾ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ನ ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ಸತೀಶ್ ಅರೋರಾ ಅವರು ನಾಲ್ವರು ಆರೋಪಿಗಳಾದ ಮುಕೇಶ್, ವಿನಯ್ ಶರ್ಮಾ, ಅಕ್ಷಯ್ ಸಿಂಗ್ ಹಾಗೂ ಪವನ್ ಗುಪ್ತಾ ಅವರಿಗೆ ಜ. 7ರಂದು ಮರಣದಂಡನೆ ಶಿಕ್ಷೆ ವಿಧಿಸಿದ್ದರು.