ಬೆಂಗಳೂರು, ಜ.16 (Daijiworld News/PY) : "ಮೀನುಗಾರರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು. ಮೀನುಗಾರರಿಗೆ ತೊಂದರೆಯಾಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ" ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ಧಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸಾಗರಮಾಲಾ ಯೋಜನೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ನಡೆಯುತ್ತಿದೆ. ಅಂದಿನ ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕರಾಗಿದ್ದ ಸತೀಶ್ ಶೈಲ್ 2017ರಲ್ಲಿ ಈ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಅಂದು ವಿರೋಧ ಮಾಡದೇ ಇದ್ದ ಕಾಂಗ್ರೆಸ್ ಮುಖಂಡರು ಇಂದು ವಿರೋಧಿಸುತ್ತಿರುವುದು ಯಾಕೆ" ಎಂದು ಕೇಳಿದ್ದಾರೆ.
"ರವೀಂದ್ರನಾಥ್ ಟ್ಯಾಗೂರ್ ಕಡಲತೀರಕ್ಕೆ ಹಾಗೂ ಸಾಂಪ್ರದಾಯಿಕ ಮತ್ತು ಯಾಂತ್ರಿಕ ಮೀನುಗಾರಿಕೆಗೆ ತೊಂದರೆಯಾಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ. ಮೀನುಗಾರರು ಯಾವುದೇ ಆತಂಕಕ್ಕೆ ಒಳಗಾಗಬಾರದು. ಅಗತ್ಯ ಬಿದ್ದರೆ ಮೀನುಗಾರರ ಹಾಗೂ ಜನಪ್ರತಿನಿಧಿಗಳ ಗೊಂದಲ ನಿವಾರಣೆಗೆ ವಿಧಾನಸೌಧದಲ್ಲಿಯೇ ಸಭೆ ನಡೆಸುವುದಾಗಿ" ತಿಳಿಸಿದರು.
ಸ್ಥಳೀಯ ಶಾಸಕಿ ರೂಪಾಲಿ ನಾಯಕ್ ಮಾತನಾಡಿ, "ಸಾಗರಮಾಲಾ ಯೋಜನೆ ಬಗ್ಗೆ ವಿರೋಧ ಮಾಡುತ್ತಿರುವವರಿಗೆ ತಿಳಿದಿಲ್ಲ. ಆದರೂ ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಯಾರೂ ಅಂದು ಈ ವಿಚಾರವಾಗಿ ವಿರೋಧಿಸಿಲ್ಲ, ಆದರೆ ಇಂದು ಕಾಂಗ್ರೆಸ್ ನಾಯಕರು, ಮಾಜಿ ಸಚಿವರು ವಿರೋಧಿಸುತ್ತಿದ್ದಾರೆ" ಎಂದರು.
"ಬೆಳಗ್ಗೆಯಿಂದ ಸಂಜೆವರೆಗೆ ಕ್ಷೇತ್ರದಲ್ಲಿ ನಾನು ಕಾರ್ಯ ನಿರ್ವಹಿಸುತ್ತಿದ್ದೇನೆ. ಸದಾ ಕ್ಷೇತ್ರದ ಅಭಿವೃದ್ದಿಗಾಗಿ ಕೆಲಸ ಮಾಡುತ್ತಿದ್ದೇನೆ. ಆದರೂ ನನ್ನ ಭಾವಚಿತ್ರಕ್ಕೆ ಚಪ್ಪಲಿ, ಸೆಗಣಿ ಹಾಕಿದ್ದಾರೆ. ಬಿಜೆಪಿಗೆ ಕೆಟ್ಟ ತರುವ ಸಲುವಾಗಿ ಹೀಗೆ ಮಾಡುತ್ತಿದ್ದಾರೆ. ಮೀನುಗಾರರಿಗೆ ಹಾಗೂ ರವೀಂದ್ರನಾಥ್ ಟ್ಯಾಗೂರ್ ಕಡಲತೀರಕ್ಕೆ ಯಾವುದೇ ತೊಂದರೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ" ಎಂದು ಹೇಳಿದರು.