ನವದೆಹಲಿ, ಜ.16 (Daijiworld News/PY): ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆಯಂದು ದಾಳಿ ನಡೆಸಲು ಸಿದ್ದತೆ ಮಾಡಿದ್ದ ಶಂಕಿತ ಐವರು ಉಗ್ರರನ್ನು ಬಂಧಿಸಲಾಗಿದೆ ಎಂದು ಗುರುವಾರ ಶ್ರೀನಗರ್ ಪೊಲೀಸರು ತಿಳಿಸಿದ್ದಾರೆ.
ದಾಳಿ ನಡೆಸಲು ಸಂಚು ರೂಪಿಸಿದ್ದ ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಐವರು ಶಂಕಿತ ಉಗ್ರರನ್ನು ಬಂಧಿಸಲಾಗಿದ್ದು, ಉಗ್ರರ ಬಳಿ ಇದ್ದ ಅಪಾರ ಪ್ರಮಾಣದ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆಂದು ವರದಿ ತಿಳಿಸಿದೆ.
ಶಂಕಿತ ಉಗ್ರರನ್ನು ಎಜಾಝ್ ಅಹ್ಮದ್ ಶೇಕ್, ಉಮರ್ ಹಮೀದ್ ಶೇಕ್, ಇಮ್ತಿಯಾಜ್ ಅಹ್ಮದ್ ಚಿಕ್ಲಾ, ಸಾಹಿಲ್ ಫಾರೂಖ್ ಗೋಜ್ರಿ ಮತ್ತು ನಾಸೀರ್ ಅಹ್ಮದ್ ಮೀರ್ ಎಂದು ಗುರುತಿಸಲಾಗಿದೆ. ಈ ಐವರು ಉಗ್ರರು ಹಝ್ರತ್ ಬಾಲ್ ನಿವಾಸಿಗಳು ಎಂದು ವರದಿ ತಿಳಿಸಿದೆ.
ಭಾರತದಲ್ಲಿ ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆ ಹಲವಾರು ಭಯೋತ್ಪಾದಕ ದಾಳಿ ನಡೆಸಿತ್ತು. ಕಳೆದ ವರ್ಷ ಫೆಬ್ರುವರಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ನಡೆಸಿದ ದಾಳಿಯಲ್ಲಿ ಸುಮಾರು 40 ಭಾರತೀಯ ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು.