ಬೆಂಗಳೂರು, ಜ.16 (Daijiworld News/PY) : ಜಾರ್ಜ್ ಹಾಗೂ ಕುಟುಂಬಸ್ಥರು ವಿದೇಶಗಳಲ್ಲಿ ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾರೆಡ್ಡಿ ದೂರು ನೀಡಿದ್ದ ಹಿನ್ನೆಲೆ ಮಾಜಿ ಸಚಿವ ಕೆ.ಜೆ ಜಾರ್ಜ್ ವಿರುದ್ಧ ತನಿಖೆ ಆರಂಭಿಸಿರುವ ಜಾರಿ ನಿರ್ದೇಶನಾಲಯ ಗುರುವಾರ ತೀವ್ರ ವಿಚಾರಣೆ ನಡೆಸಿದೆ.
ಶಾಂತಿನಗರದಲ್ಲಿರುವ ಇ.ಡಿ ಕಚೇರಿಯಲ್ಲಿ ತನಿಖಾಧಿಕಾರಿಗಳ ತಂಡವು ಜಾರ್ಜ್ ಅವರನ್ನು 4 ಗಂಟೆಗಳಿಗೂ ಅಧಿಕ ಕಾಲ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡಿದ್ದು, ಆಸ್ತಿ ವಿವರಗಳಿಗೆ ಸಂಬಂಧಿಸಿದಂತೆ ನೀಡಿರುವ ದಾಖಲೆಗಳನ್ನು ಪರಿಶೀಲಿಸಿದ್ದು ಅವರ ಸಂಬಂಧಿಕರ ಆಸ್ತಿ ವಿವರವನ್ನೂ ಪಡೆದುಕೊಂಡಿದ್ದಾರೆ.
ಲೆಕ್ಕಪರಿಶೋಧಕರ ಜೊತೆ ಇ.ಡಿ ಕಚೇರಿಗೆ ತೆರಳಿದ್ದ ಜಾರ್ಜ್ ವಿದೇಶಗಳಲ್ಲಿ ಸಂಬಂಧಿಕರ ಹೆಸರಿನಲ್ಲಿರುವ ಆಸ್ತಿ ಹಾಗೂ ಇನ್ನಿತರೆ ವಾಣಿಜ್ಯ ವ್ಯವಹಾರಗಳ ಕುರಿತು ದಾಖಲೆಗಳನ್ನು ನೀಡಿದ್ದಾರೆ ಎಂದು ಹೇಳಲಾಗಿದೆ. ಅಧಿಕಾರಿಗಳು ಮತ್ತಷ್ಟು ಪೂರಕ ದಾಖಲೆಗಳನ್ನು ನೀಡುವಂತೆ ಸೂಚಿಸಿದ್ದು ಅಗತ್ಯವಾದ ವಿಚಾರಣೆಗೆ ಕರೆದಾಗ ಹಾಜರಾಗುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಚಾರಣೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಜಾರ್ಜ್, "ದೇಶದ ಕಾನೂನಿನ ಮೇಲೆ ನಂಬಿಕೆಯಿದೆ. ಇ.ಡಿ ವಿಚಾರಣೆಗೆ ಸಹಕರಿಸುತ್ತೇನೆ. ಅಧಿಕಾರಿಗಳು ಮತ್ತಷ್ಟು ದಾಖಲೆಗಳನ್ನು ಕೇಳಿದ್ದಾರೆ. ದಾಖಲೆಗಳನ್ನು ನೀಡುತ್ತೇನೆ" ಎಂದು ತಿಳಿಸಿದ್ದಾರೆ.