ಬೆಂಗಳೂರು, ಜ 17 (Daijiworld News/ MB) : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹರಿಹರದ ಹರಜಾತ್ರೆಯಲ್ಲಿ ನಡೆದ ಘಟನೆಗೆ ಕ್ಷಮೆಯಾಚಿಸಿದ್ದಾರೆ.
ಹರಿಹರದ ಹರಜಾತ್ರೆಯಲ್ಲಿ 'ನಾನು ಆಡಿದ ಮಾತುಗಳಿಂದ ಯಾರಿಗಾದರೂ ಬೇಸರವಾಗಿದ್ದಲ್ಲಿ ಕ್ಷಮೆಯಿರಲಿ' ಎಂದು ಹೇಳಿದ್ದಾರೆ.
'ಸರ್ಕಾರದ ಮೇಲೆ ಬೇರೆ ಬೇರೆ ಸಮಾಜದ ಒತ್ತಡವಿರುತ್ತದೆ. ವಚನಾನಂದ ಸ್ವಾಮೀಜಿ ಹೇಳಿಕೆ ಸಹಜವಾದದ್ದು. ಅದರ ಬಗ್ಗೆ ಚರ್ಚೆ ನಡೆಸುವುದು ಅನಾವಶ್ಯಕ ಮುಖ್ಯಮಂತ್ರಿಯಾಗಿ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವುದು ನನ್ನ ಜವಾಬ್ದಾರಿ. ಎಲ್ಲಾ ಸ್ವಾಮೀಜಿಗಳು ನನ್ನನ್ನು ಪ್ರೀತಿಯಿಂದ ಕಾಣುತ್ತಾರೆ. ಅವರಿಗೆ ನನ್ನ ಮೇಲೆ ಇರುವ ಸಲುಗೆ, ಪ್ರೀತಿಯಿಂದ ಇಂತಹ ಪ್ರಕ್ರಿಯೆಗಳು ಸಹಜವಾದದ್ದು' ಎಂದು ಹೇಳಿದ್ದಾರೆ.
'ನಾನು ಬೈದವರೆನ್ನ ಬಂಧುಗಳು ಎಂಬ ಬಸವಣ್ಣನವರ ಮಾತಿನಲ್ಲಿ ನಂಬಿಕೆ ಇಟ್ಟವನು. ನಾಡಿನ ಶರಣರು, ಸ್ವಾಮೀಜಿಗಳ ಆಶೀರ್ವಾದ ನನ್ನ ಮೇಲೆ ಸದಾ ಇರುತ್ತದೆ ಎಂದು ಭಾವಿಸಿದ್ದೇನೆ' ಎಂದಿದ್ದಾರೆ.
ಮಂಗಳವಾರ ಹರಜಾತ್ರೆಯಲ್ಲಿ ವೇದಿಕೆಯಲ್ಲೇ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ನೀಡಬೇಕು ಎಂಬುದರ ಬಗ್ಗೆ ಪ್ರಸ್ತಾಪ ಮಾಡಿದ್ದರು. ಸ್ವಾಮೀಜಿಯ ವರ್ತನೆಯಿಂದ ಆಕ್ರೋಶಗೊಂಡ ಮುಖ್ಯಮಂತ್ರಿ ಯಡಿಯೂರಪ್ಪ ಆಕ್ಷೇಪ ವ್ಯಕ್ತಪಡಿಸಿ ವೇದಿಕೆಯಿಂದ ಹೊರಟು ಹೋಗಲು ಮುಂದಾಗಿದ್ದು ಆ ಸಂದರ್ಭದಲ್ಲಿ ಸ್ವಾಮೀಜಿ, ನೀವು ಇಲ್ಲಿ ಕುಳಿತುಕೊಳ್ಳಿ ಎಂದು ಎರಡು ಮೂರು ಬಾರಿ ಜೋರು ಧ್ವನಿಯಲ್ಲಿ ಹೇಳಿದ್ದರು. ಬಳಿಕ ಯಡಿಯೂರಪ್ಪ ಅವರು ಕುರ್ಚಿಯ ಮೇಲೆ ಕುಳಿತುಕೊಂಡಿದ್ದರು.