ಬೆಂಗಳೂರು, ಜ 17 (Daijiworld News/ MB) : ವಿವಾದಕ್ಕೆ ಕಾರಣವಾಗಿದ್ದ ಸರಕಾರಿ ಶಾಲಾ ಆವರಣದಲ್ಲಿ ಮಾಡಲಾಗಿದ್ದ ಅಲ್ಲಾಡ್ಸು ಡ್ಯಾನ್ಸ್ ತಿರುವು ಪಡೆದುಕೊಂಡಿದ್ದು ನೃತ್ಯ ಮಾಡಿದವರು ಯಾರೂ ಕಾಡಾ ಸರ್ಕಾರಿ ಶಾಲೆಯ ಶಿಕ್ಷಕರು ಅಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.
ಗುರುವಾರ ವಿಡಿಯೋ ಮೂಲಕ ಸುರೇಶ್ ಕುಮಾರ್ ಅವರೇ ಈ ಬಗ್ಗೆ ತಿಳಿಸಿದ್ದು, "ಈ ಪ್ರಕರಣದಲ್ಲಿ ಶಾಲಾ ಶಿಕ್ಷಕರದ್ದು ಯಾರದೂ ತಪ್ಪಿಲ್ಲ. ಶಾಲಾ ಆವರಣದಲ್ಲಿ ಮಹಿಳಾ ಸಂಘದವರು ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಮಹಿಳಾ ಸಂಘದವರು ಕಾರ್ಯಕ್ರಮದ ಕೊನೆಯಲ್ಲಿ ನೃತ್ಯ ಮಾಡಿದ್ದಾರೆ" ಎಂದು ಹೇಳಿದ್ದಾರೆ
ಶಾಲಾ ಆವರಣದಲ್ಲಿ ಇಂತಹ ಕಾರ್ಯಕ್ರಮಗಳಿಗೆ ಅವಕಾಶ ಕೊಡಬಾರದು. ಆದರೆ ಮಹಿಳಾ ಸಂಘದವರು ಶಾಲೆಗೆ ಸಹಾಯ ಮಾಡಿರುವ ಹಿನ್ನಲೆಯಲ್ಲಿ ಆವರಣದಲ್ಲಿ ಕಾರ್ಯಕ್ರಮ ಮಾಡುವ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಮಹಿಳಾ ಸಂಘದವರು ಈ ಘಟನೆಗೆ ಸಂಬಂಧಿಸಿ ಕ್ಷಮಾಪಣಾ ಪತ್ರ ಬರೆದು ಕೊಟ್ಟಿದ್ದಾರೆ. ಶಾಲಾ ಅಭಿವೃದ್ಧಿ ಸಮಿತಿ ಈ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ಮುಂದೆ ಸರ್ಕಾರಿ ಶಾಲಾ ಆವರಣದಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಬಿಟ್ಟು ಅನ್ಯ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಡಬಾರದು. ಬೇರೆ ಕಾರ್ಯಕ್ರಮಗಳಿಗೆ ಶಾಲಾ ಆವರಣದಲ್ಲಿ ಅವಕಾಶ ಮಾಡಿಕೊಟ್ಟಲ್ಲಿ ಅದಕ್ಕೆ ಶಾಲಾ ಅಭಿವೃದ್ಧಿ ಸಮಿತಿ(SDMC) ಜವಾಬ್ದಾರಿಯಾಗುತ್ತದೆ. ಇಂತಹ ಘಟನೆಗಳು ಇನ್ನು ನಡೆಯಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.