ಬೆಂಗಳೂರು, ಜ 17 (Daijiworld News/MB) : ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಮತೀಯ ಗಲಭೆ ಹುಟ್ಟುಹಾಕಲು, ಉಗ್ರ ಚಟುವಟಿಕೆ ನಡೆಸಲು ಹಾಗೂ ಜಡ್ಜ್ ಮತ್ತು ಪೊಲೀಸರ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಶಂಕಿತ ಉಗ್ರ ಮೆಹಬೂಬ್ ಪಾಷಾನನ್ನು ಸಿಸಿಬಿ ಮತ್ತು ರಾಜ್ಯ ಗುಪ್ತದಳ ಜಂಟಿ ಕಾರ್ಯಾಚರಣೆ ನಡೆಸಿ ಗುರುವಾರ ವಶಕ್ಕೆ ಪಡೆದಿದೆ.
ಇತ್ತೀಚೆಗೆ ಮೂವರು ಶಂಕಿತ ಉಗ್ರರನ್ನು ಬೆಂಗಳೂರಿನಲ್ಲಿ ತಮಿಳುನಾಡಿನ ಪೊಲೀಸರು ಬಂಧಿಸುತ್ತಿದ್ದಂತೆ ಮೆಹಬೂಬ್ ಪಾಷಾ ಹಾಗೂ ಆತನ 16 ಸಹಚರರು ತಲೆಮರೆಸಿಕೊಂಡಿದ್ದರು. ಈಗಾಗಲೇ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಅವರೆಲ್ಲರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ಪಾಷಾ ಮತ್ತು ಆತನ ಸಹಚರರು ಶಿವಮೊಗ್ಗ, ರಾಮನಗರ, ಕೋಲಾರ ಹಾಗೂ ಬೆಂಗಳೂರಿನಲ್ಲಿ ತಲೆಮರೆಸಿಕೊಂಡು ಓಡಾಟ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ದೊರೆತಿತ್ತು. ಆ ಹಿನ್ನಲೆಯಲ್ಲಿ ಕಾರ್ಯಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದು ಆತನ ವಿಚಾರಣೆಯನ್ನು ಅಜ್ಞಾತ ಸ್ಥಳದಲ್ಲಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಪಾಷಾ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಎಸ್)ನೊಂದಿಗೆ ನಂಟು ಹೊಂದಿದ್ದು ಆತನ ಪತ್ತೆ ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದರು.
ಈತ ಬೆಂಗಳೂರು ಜಿಹಾದಿ ತಂಡದ ನೇತೃತ್ವವನ್ನು ವಹಿಸಿದ್ದು ಬನ್ನೇರುಘಟ್ಟ ರಸ್ತೆಯಲ್ಲಿ 'ಅಲ್ ಹಿಂದ್' ಟ್ರಸ್ಟ್ ಸ್ಥಾಪಿಸಿ ಜಿಹಾದಿ ಸಂಘಟನೆ ಕಟ್ಟಲು ಈತ ಮುಂದಾಗಿದ್ದ ಎನ್ನಲಾಗಿದೆ. ಅಷ್ಟು ಮಾತ್ರವಲ್ಲದೇ ಈ ಟ್ರಸ್ಟ್ ಹೆಸರಿನಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಜಮೀನು ಖರೀದಿ ಮಾಡಲು ಮುಂದಾಗಿದ್ದ ಎಂದು ತಿಳಿದು ಬಂದಿದೆ.
ಪಾಷಾ ತಮಿಳುನಾಡಿನ ಕ್ಯೂ ಬ್ರಾಂಚ್ ಪೊಲೀಸರು ಮತ್ತು ಸಿಸಿಬಿ ಕಾರ್ಯಚರಣೆ ವೇಳೆ ಪರಾರಿಯಾಗಿದ್ದು ಆತನನ್ನು ಬುಧವಾರ ರಾತ್ರಿಯೇ ವಶಕ್ಕೆ ಪಡೆಯಲಾಗಿತ್ತು ಎಂದು ಹೇಳಲಾಗಿದೆ.
ಶಂಕಿತ ಉಗ್ರ ಮೆಹಬೂಬ್ ಪಾಷಾ ಐಎಸ್ ಸದಸ್ಯನಾಗಿದ್ದು ಬೆಂಗಳೂರು ಗುರಪ್ಪನಪಾಳ್ಯದಲ್ಲಿ ನೆಲೆಸಿದ್ದ. ತನ್ನ ಮನೆಯಲ್ಲೇ ಸಹಚರರ ಸಭೆ ನಡೆಸಿ, ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಉಗ್ರ ಚಟುವಟಿಕೆ ನಡೆಸಲು ಸಂಚು ಮಾಡಿದ್ದ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.