ಹೊಸದಿಲ್ಲಿ, ಜ.17 (Daijiworld News/PY) : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿರ್ಮಿತ ಆಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-30’ ಅನ್ನು ಫ್ರಾನ್ಸ್ನ ಗಯಾನಾ ಬಾಹ್ಯಾಕಾಶ ಕೇಂದ್ರದಿಂದ ಶುಕ್ರವಾರ ನಸುಕಿನ ಜಾವ ಯಶಸ್ವಿಯಾಗಿ ಉಡಾಯಿಸಲಾಯಿತು.
ಜಿಸ್ಯಾಟ್-30 ಉಪಗ್ರಹವನ್ನು ಉಡಾವಣೆಯ 38 ನಿಮಿಷಗಳ ನಂತರ ಕಕ್ಷೆಗೆ ಸೇರಿಸಲಾಯಿತು.
ದಕ್ಷಿಣ ಅಮೆರಿಕಾದ ಈಶಾನ್ಯ ಕರಾವಳಿಯಲ್ಲಿರುವ ಕೌರೌನಲ್ಲಿರುವ ಎರೇನ್ ಉಡ್ಡಯನ ಕಾಂಪ್ಲೆಕ್ಸ್ನಿಂದ ಭಾರತೀಯ ಕಾಲಮಾನದ ಪ್ರಕಾರ, ಶುಕ್ರವಾರ ನಸುಕಿನ ಜಾವ 2.35ರ ವೇಳೆಗೆ ‘ಎರೇನ್ 5’ ಎಂಬ ರಾಕೆಟ್ ವಾಹಕದ ಮೂಲಕ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದಾರೆ.
ಜಿಸ್ಯಾಟ್ ಒಟ್ಟು 3357 ಕೆ.ಜಿ ತೂಕ ಹೊಂದಿದ್ದು, ವಿಸ್ಕ್ರತ ವ್ಯಾಪ್ತಿಯೊಂದಿಗೆ ಇನ್ಸಾಟ್-4ಎ ಉಪಗ್ರಹದ ಸೇವೆಗಳನ್ನು ಒದಗಿಸಲಿದೆ. ಕೆಯು ಬ್ಯಾಂಡ್ ಮತ್ತು ವಿಸ್ತರಿತ ವ್ಯಾಪ್ತಿಯ ಸಿ-ಬ್ಯಾಂಡ್ ಸೇವೆಗಳನ್ನು ನೀಡಲಿದ್ದು, ಭಾರತೀಯ ಭೂ ಪ್ರದೇಶ, ದ್ವೀಪ ಪ್ರದೇಶ, ಕೊಲ್ಲಿ ರಾಷ್ಟ್ರಗಳು ಸೇರಿದಂತೆ ಬಹುತೇಕ ಏಷ್ಯನ್ ದೇಶಗಳು ಹಾಗೂ ಆಸ್ಟ್ರೇಲಿಯಾದ ವ್ಯಾಪ್ತಿಯಲ್ಲಿಯೂ ಸೇವೆ ನೀಡಲು ಶಕ್ತವಾಗಿದೆ.
ಸುಮಾರು 15 ವರ್ಷಗಳ ಜೀವಿತಾವಧಿಯನ್ನು ಹೊಂದಿರುವ ಜಿಸ್ಯಾಟ್-30 ಇಸ್ರೋದ ವಿಸ್ತರಿತ ಐ-3ಕೆ ಬಸ್ ಸಂರಚನೆಯನ್ನು ಅಳವಡಿಸಿಕೊಂಡಿದೆ. ಜಿಸ್ಯಾಟ್-30 ಕಾರ್ಯ ಪ್ರಾರಂಭಿಸಿದ ನಂತರ, ಗ್ರಮೀಣ ಪ್ರದೇಶಗಳ ಡಿಜಿಟಲ್ ಅಂತರವನ್ನು ಕಿರಿದುಗೊಳಿಸಲು ಬಾಹ್ಯಾಕಾಶ ಅನ್ವಯಿಕೆಗಳನ್ನು ಬಳಸಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.