ನವದೆಹಲಿ, ಜ 17 (Daijiworld News/ MB) : ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಪ್ರಕ್ರಿಯೆ ಎಪ್ರಿಲ್ 1 ರಿಂದ ಆರಂಭವಾಗಲಿದ್ದು ಈ ಸಂದರ್ಭದಲ್ಲಿ ಮಾಹಿತಿ ನೀಡುವಾಗ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿಯನ್ನು ನೀಡಿದರೆ ಅಥವಾ ಮಾಹಿತಿ ನೀಡಲು ನಿರಾಕರಣೆ ಮಾಡಿದರೆ ಅವರಿಗೆ 1000 ರೂ. ದಂಡ ಹಾಕಾಲಾಗುವುದು. ಈ ಕುರಿತು ಪೌರತ್ವ ನಿಯಮಗಳ ರೂಲ್ 17ರಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ಕೇಂದ್ರ ಗೃಹಸಚಿವಾಲಯ ತಿಳಿಸಿದೆ.
ಎನ್ಪಿಆರ್ಗೆ ತೀವ್ರ ವಿರೋಧ ವ್ಯಕ್ತವಾಗಿದ್ದು ಈ ಪ್ರಕ್ರಿಯೆ ಸಂದರ್ಭದಲ್ಲಿ ಯಾವುದೇ ಮಾಹಿತಿ ನೀಡದೆ ಪ್ರತಿಭಟನೆ ನಡೆಸುವುದಾಗಿ ಹಲವರು ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಗೃಹ ಇಲಾಖೆ ತಿಳಿಸಿರುವ ಈ ಮಾಹಿತಿ ಈಗ ಮಹತ್ವ ಪಡೆದುಕೊಂಡಿದೆ.
ಲೇಖಕಿ ಆರುಂಧತಿ ರಾಯ್ ಅವರು ಎನ್ಪಿಆರ್, ಎನ್ಆರ್ಸಿ, ಸಿಎಎ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಅಧಿಕಾರಿಗಳು ಮನೆಗೆ ಬಂದು ನಿಮ್ಮ ಹೆಸರು ಕೇಳಿದಾಗ ರಂಗಾಬಿಲ್ಲಾ, ಕುಂಗ್ಫು ಕಟ್ಟಾ ಎಂಬಾತ ಹೆಸರು ನೀಡಿ ಎಂದು ಹೇಳಿದ್ದರು.
ಈ ಕುರಿತು ಮಾತನಾಡಿದ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದಲ್ಲಿ ಅಥವಾ ಮಾಹಿತಿ ನೀಡಲು ನಿರಾಕರಣೆ ಮಾಡಿದಲ್ಲಿ 1000 ರೂ. ದಂಡ ಹಾಕುವ ನಿಯಮ ಮೊದಲಿನಿಂದಲೂ ಇದೆ. 2011 ಹಾಗೂ 2015ರಲ್ಲಿ ಗಣತಿ ನಡೆಸಿದ ಸಂದರ್ಭದಲ್ಲಿ ಯಾರಿಗೂ ದಂಡ ಹಾಕುವ ಪರಿಸ್ಥಿತಿ ಮುಂದಾಗಿರಲಿಲ್ಲ. ಬಹುತೇಕರು ತಮ್ಮ ಎಲ್ಲಾ ದಾಖಲೆಗಳನ್ನು ನೀಡುತ್ತಾರೆ ಎಂದು ತಿಳಿಸಿದ್ದಾರೆ.
ಪ್ಯಾನ್ ಬೇಕಾಗಿಲ್ಲ
ಗಣತಿ ಸಂದರ್ಭದಲ್ಲಿ ಬಹುತೇಕರು ತಮ್ಮ ಪ್ಯಾನ್ ಸಂಖ್ಯೆಯ ಮಾಹಿತಿಯನ್ನು ನೀಡಲು ಒಪ್ಪುವುದಿಲ್ಲ. ಈ ಹಿನ್ನಲೆಯಲ್ಲಿ ಪ್ಯಾನ್ ಸಂಖ್ಯೆಯ ಮಾಹಿತಿಯನ್ನು ಪಡೆಯಲಾಗುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶುಕ್ರವಾರ ಎನ್ಪಿಆರ್ ಹಾಗೂ 2020ರ ಜನಗಣತಿ ಪ್ರಕ್ರಿಯೆಯ ಕುರಿತು ಚರ್ಚೆ ಮಾಡಲು ಕೇಂದ್ರ ಇಲಾಖೆ ಸಭೆ ಕರೆದಿದ್ದು ಇದರಲ್ಲಿ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರೈ, ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಗಣತಿ ನಿರ್ದೇಶಕರು ಪಾಲ್ಗೊಳ್ಳಲಿದ್ದಾರೆ.