ಬೆಂಗಳೂರು, ಜ 17 (Daijiworld News/MSP): ಕೇರಳ ಪ್ರವಾಸೋದ್ಯಮ ಇಲಾಖೆಯೂ ಗೋಮಾಂಸದ ಖಾದ್ಯದ ಚಿತ್ರವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದು ಇದು ತೀವ್ರ ಚರ್ಚೆಗೆ ಒಳಗಾಗಿದೆ. ಪರ-ವಿರೋಧದ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ.
"ಎಳೆಯದಾದ ಕೋಮಲ ಗೋಮಾಂಸದ ಭಾಗ, ಹುರಿದ ಸುವಾಸನೆ ಭರಿತ ಮಸಾಲೆ, ತೆಂಗಿನಕಾಯಿಯ ಕರಿದ ತುಂಡುಗಳು ಮತ್ತು ಕರಿಬೇವಿನ ಜತೆ ಸಣ್ಣನೆ ಹುರಿದಿರುವುದು. ಇದು ಅತ್ಯಂತ ಶಾಸ್ತ್ರೀಯವಾದ ಖಾದ್ಯ. ಮಸಾಲೆಯ ಭೂಮಿ ಕೇರಳದ ತಿನಿಸು' ಎಂದು ಕೇರಳ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಬೀಫ್ ಪ್ರಿಯರು ಇದನ್ನು ಸ್ವಾಗತಿಸಿದ್ರೆ, ಇದರ ವಿರೋಧಿಗಳು ಧಾರ್ಮಿಕ ನಂಬಿಕೆಗಳಿಗೆ ನೋವು ಉಂಟುಮಾಡುವ ಅಧಿಕಾರ ನಿಮಗಿಲ್ಲ. ಕೇರಳ ಪ್ರವಾಸೋಧ್ಯಮ ಹೀಗೇ ಹಂದಿ ಮಾಂಸವನ್ನು ಪ್ರಚಾರ ಮಾಡುತ್ತೀರಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಇನ್ನು ವಿಶ್ವ ಹಿಂದೂ ಪರಿಷತ್ ಖಡಕ್ ಆಗಿ ಪ್ರತಿಕ್ರಿಯಿಸಿದ್ದು, ಕೇರಳ ಪ್ರವಾಸೋದ್ಯಮ ಇಲಾಖೆಯೂ ಗೋಮಾಂಸ ಖಾದ್ಯವನ್ನು ಪ್ರಚಾರ ಮಾಡುತ್ತದೆಯೇ ಅಥವಾ ಪ್ರವಾಸೋದ್ಯಮವನ್ನು ಪ್ರಚಾರ ಮಾಡುತ್ತದೆಯೇ? ಎಂದು ಪ್ರಶ್ನಿಸಿದೆ.
ಕೇರಳ ಪ್ರವಾಸೋದ್ಯಮ ಇಲಾಖೆ ಟ್ವೀಟ್ ನನ್ನು ವೆಲ್ ಕಮ್ ಕರ್ನಾಟಕ ಎಂದು ಬರೆದು ಸಚಿವ ಸಿ.ಟಿ ರವಿ ರೀ ಟ್ವೀಟ್ ಮಾಡಿದ್ದರು. ಈ ಟ್ವಿಟ್ ಮತ್ತಷ್ಟು ಗೊಂದಲ ಹುಟ್ಟುಹಾಕಿದಾಗ ಸ್ಪಷ್ಟನೆ ನೀಡಿರುವ ಸಚಿವರು, 'ನಾನು ಗೋಮಾಂಸವನ್ನು ಬೆಂಬಲಿಸುತ್ತೇನೆ ಎಂದು ನೀವು ಹೇಗೆ ಯೋಚಿಸಿದಿರಿ? ಅದು ನನ್ನ ನಂಬಿಕೆಗೆ ವಿರುದ್ಧವಾಗಿದೆ. ಕೇರಳ ಪ್ರವಾಸೋದ್ಯಮದ ಟ್ವೀಟ್ನಿಂದ ನಿಮ್ಮಲ್ಲಿ ಅನೇಕರಿಗೆ ನೋವಾಗಿದೆ ಎಂದು ನನಗೆ ಗೊತ್ತು. ನನ್ನ ಟ್ವೀಟ್ ವ್ಯಂಗ್ಯಾತ್ಮಕ ಮತ್ತು ಅದರ ವಿರುದ್ಧದ ಮೌನ ಪ್ರತಿಭಟನೆಯಾಗಿತ್ತು. ಹೀಗಾಗಿ ನಿಮ್ಮನ್ನು ಕರ್ನಾಟಕಕ್ಕೆ ಬರುವಂತೆ ಸ್ವಾಗತಿಸಿದ್ದೆ' ಎಂದು ಹೇಳಿದ್ದಾರೆ.