ಬೆಂಗಳೂರು, ಜ.17 (Daijiworld News/PY) : "ಭಾರತವನ್ನು ನಾವು ಹಿಂದೂ ರಾಷ್ಟ್ರವನ್ನಾಗಿಸಲು ಬಿಡುವುದಿಲ್ಲ" ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಿಎಎ ಹಾಗೂ ಎನ್ಆರ್ಸಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, "ಪೌರತ್ವ ಕಾಯ್ದೆ, ಎನ್.ಪಿ.ಆರ್, ಎನ್.ಆರ್.ಸಿ ಎಲ್ಲವೂ ಒಂದೇ. ಈ ಬಗ್ಗೆ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಈ ವಿಚಾರವಾಗಿ ಮೋದಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ" ಎಂದು ಹೇಳಿದರು.
"ಎನ್ಪಿಆರ್ ಕಾಯ್ದೆಯ ಹಿಂದೆ ಒಂದು ಉದ್ದೇಶವಿದೆ. ಇದು ಸಂವಿಧಾನ ವಿರೋಧಿ ಕಾಯ್ದೆಯಾಗಿದೆ. ನಮ್ಮ ದೇಶಕ್ಕೆ ಮುಸ್ಲಿಮರು ಬಂದಿದ್ದಾರೆ. ಬಾಂಗ್ಲಾ, ಪಾಕಿಸ್ತಾನ, ಅಫ್ಘಾನಿಸ್ಥಾನ ಬಿಟ್ಟು ಇತರ ನೆರೆ ರಾಜ್ಯಗಳಿಂದಲೂ ಹಲವಾರು ವಲಸಿಗರು ಬಂದಿದ್ದಾರೆ. ಆದರೆ ಯಾಕೆ ಮುಸ್ಲಿಮರನ್ನು ಹೊರಗಿಟ್ಟಿದ್ದಾರೆ" ಎಂದು ಕೇಳಿದರು.
"ದೇಶವನ್ನು ಹಿಂದೂ ರಾಷ್ಟ್ರವನ್ನು ಮಾಡುವುದು ನಿಮ್ಮ ಉದ್ದೇಶ. ಇದೊಂದು ಬಿಜೆಪಿಯ ಹಿಡೆನ್ ಅಜೆಂಡವಾಗಿದೆ. ಸಂವಿಧಾನದ ಮೂಲ ಆಶಯವಾಗಿದ್ದ ಜಾತ್ಯಾತೀತತೆಯನ್ನು ಉಲ್ಲಂಘಿಸಲಾಗುತ್ತಿದೆ. ಬಹುಮತ ಇರುವ ಪಕ್ಷ ಕಾನೂನು ಮಾಡಲಿ. ಆದರೆ ಕಾನೂನು ನ್ಯಾಯಬದ್ದವಾಗದೇ ಇದ್ದಲ್ಲಿ ಅದನ್ನು ವಿರೋಧಿಸಿ ಎಂದು ಗಾಂಧೀಜಿ ಹೇಳಿದ್ದರು. ದೇಶದಲ್ಲಿ ಕಿತ್ತು ತಿನ್ನುವ ಸಮಸ್ಯೆಗಳಿದ್ದು ಈ ಬಗ್ಗೆ ಯಾರೂ ಧ್ವನಿ ಎತ್ತುತ್ತಿಲ್ಲ. ಹೀಗಾಗಿ ನಮಗೆ ಈ ಕಾಯ್ದೆಯ ಅವಶ್ಯಕತೆ ಇದೆಯಾ" ಎಂದು ಹೇಳಿದರು.
"ಪ್ರಣಾಳಿಕೆಯಲ್ಲಿ ನೀವು ಎನ್ಆರ್ಸಿ ಜಾರಿಗೆ ತರುತ್ತೇವೆ ಎಂದಿದ್ದಕ್ಕೆ ಅದನ್ನು ಜಾರಿಗೆ ತಂದಿದ್ದೀರ. ಪ್ರಣಾಳಿಕೆಯಲ್ಲಿ ಬೇರೆ ವಿಚಾರದ ಬಗ್ಗೆಯೂ ಹೇಳಿದ್ದೀರಿ ಆದರೆ ಅದನ್ಯಾಕೆ ಜಾರಿಗೆ ತಂದಿಲ್ಲ. ಬಹುಮತ ಇದ್ದರೂ ಜನವಿರೋಧಿ ಕಾನೂನುಗಳನ್ನು ಜಾರಿಗೊಳಿಸಬಾರದು. ಇದನ್ನು ನಾವು ವಿರೋಧ ಮಾಡಲೇಬೇಕು" ಎಂದು ಹೇಳಿದರು.
"ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾನೂನು ಸಂವಿಧಾನ ವಿರೋಧಿ ಮಾತ್ರವಲ್ಲದೆ ಅದು ಮಾನವೀಯತೆಯ, ಮನುಷ್ಯತ್ವದ ವಿರೋಧವೂ ಹೌದು. ಈ ಕಾಯ್ದೆಯಿಂದ ದಲಿತರು, ಆದಿವಾಸಿಗಳು ಸೇರಿದಂತೆ ಎಲ್ಲರಿಗೂ ಅನ್ಯಾಯವಾಗುತ್ತಿದೆ. ರೈತರು, ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನೋಡಿಯೇ ನಾವು ದೇಶವನ್ನು ಹಿಂದೂ ರಾಷ್ಟ್ರವನ್ನಾಗಲು ಬಿಡುವುದಿಲ್ಲ" ಎಂದು ಹೇಳಿದರು.