ಬೆಂಗಳೂರು, ಜ.17 (Daijiworld News/PY) : "ಇವತ್ತು ಅಥವಾ ನಾಳೆ ಕೆಪಿಸಿಸಿ ನೂತನ ಅಧ್ಯಕ್ಷರ ಬಗ್ಗೆ ಅಧಿಕೃತವಾಗಿ ತಿಳಿಯುತ್ತದೆ. ಪಕ್ಷ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದನ್ನು ಪಾಲಿಸಬೇಕಾಗುತ್ತದೆ" ಎಂದು ಕಾಂಗ್ರೆಸ್ ನಾಯಕ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಮಾತನಾಡಿದ ಅವರು, "ಪಕ್ಷದ ತೀರ್ಮಾನ ಒಂದಾದರೆ ವೈಯುಕ್ತಿಕ ತೀರ್ಮಾನವೊಂದಿರುತ್ತದೆ. ಎಲ್ಲದಕ್ಕೂ ಕಾದು ನೋಡೋಣ, ಮೊದಲೇ ಹೇಳಲು ಆಗುವುದಿಲ್ಲ" ಎಂದು ಹೇಳಿದರು.
"ಕಾರ್ಯಾಧ್ಯಕ್ಷ ನೇಮಕ ಮಾಡುವುದರಿಂದ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಎಲ್ಲಾ ಕಡೆ ಓಡಾಡುವುದಕ್ಕೆ ಅಧ್ಯಕ್ಷರೊಬ್ಬರಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ಕಾರ್ಯಾಧ್ಯಕ್ಷ ನೇಮಕ ಮಾಡುವುದರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಬಹುದು" ಎಂದರು.
"ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿ ಎಂದು ನಾನ್ಯಾರಿಗೂ ಮನವಿ ಮಾಡಿಲ್ಲ. ಆದರೆ ಯಾರು ಸೂಕ್ತ ಎನ್ನುವ ಪಟ್ಟಿಗೆ ನನ್ನ ಹೆಸರನ್ನು ಸೂಚಿಸಿದ್ದಾರೆ. ಇದನ್ನೆಲ್ಲಾ ಇಂದು ಅಥವಾ ನಾಳೆ ಹೈಕಮಾಂಡ್" ಅಂತಿಮಗೊಳಿಸಲಿದೆ.
ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಅವರು, "ಸಂಪುಟ ವಿಸ್ತರಣೆ ಅವರ ಪಕ್ಷದ ಆಂತರಿಕ ವಿಚಾರವಾಗಿದೆ. ಅಂದು ನಮ್ಮ ಪಕ್ಷದ ಶಾಸಕರನ್ನು ಕರೆದುಕೊಂಡು ಹೋಗಿ ಮಂತ್ರಿ ಮಾಡುವ ಆಮಿಷವೊಡ್ಡಿದ್ದಾರೆ. ಈಗ ಆ ಮಾತಿನಂತೆ ನಡೆದುಕಕೊಳ್ಳಬೇಕಲ್ಲಾ. ಅವರದ್ದೇ ಸರ್ಕಾರ ಇದೆ. ಶಾಸಕರು ಮಂತ್ರಿ ಆಗುತ್ತಾರೆ ಅಂತ ಜನರೂ ಸಹ ಮತ ಹಾಕಿದ್ದಾರೆ" ಎಂದು ಹೇಳಿದರು.