ನವದೆಹಲಿ, ಜ 17 (Daijiworld News/ MB) : ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಮುಕೇಶ್ ಸಿಂಗ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಿರಸ್ಕಾರ ಮಾಡಿದ್ದಾರೆ.
ಗುರುವಾರ ಸಂಜೆ ಅಪರಾಧಿ ಮುಕೇಶ್ ಸಿಂಗ್ ನ ಕ್ಷಮಾದಾನ ಅರ್ಜಿಯನ್ನು ತಿರಸ್ಕಾರ ಮಾಡುವಂತೆ ಶಿಫಾರಸ್ಸು ಮಾಡಿ ಕೇಂದ್ರ ಗೃಹ ಸಚಿವಾಲಯಕ್ಕೆ ರವಾನೆ ಮಾಡಲಾಗಿತ್ತು.
ನಿರ್ಭಯಾ ಪ್ರಕರಣದಲ್ಲಿ ತನಗೆ ನೀಡಲಾದ ಗಲ್ಲುಶಿಕ್ಷೆಯಿಂದ ವಿನಾಯಿತಿ ನೀಡುವಂತೆ ಅಪರಾಧಿ ಮುಕೇಶ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಸರ್ಕಾರ ಗುರುವಾರ ತಿರಸ್ಕಾರ ಮಾಡಿ ಗೃಹ ಸಚಿವಾಲಯಕ್ಕೆ ರವಾನೆ ಮಾಡಿತ್ತು. ಗೃಹ ಸಚಿವಾಲಯದಿಂದ ರಾಷ್ಟ್ರಪತಿಯವರಿಗೆ ರವಾನಿಸಲಾಗಿತ್ತು ಎಂದು ವರದಿ ತಿಳಿಸಿದೆ.