ನವದೆಹಲಿ, ಜ.17 (Daijiworld News/PY) : "ಸರ್ಕಾರವು ನಮ್ಮ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ನಿರ್ಭಯಾಗೆ ನ್ಯಾಯ ದೊರಕಿಸಿಕೊಡುವಲ್ಲಿ ರಾಜಕೀಯ ಮಾಡಬೇಡಿ" ಎಂದು ನಿರ್ಭಯಾ ತಾಯಿ ಆಶಾದೇವಿ ಹೇಳಿದ್ದಾರೆ.
ಅಪರಾಧಿಗಳಿಗೆ ಗಲ್ಲು ಶಿಕ್ಷೆ ತಡವಾಗುತ್ತಿರುವ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸರ್ಕಾರ ನಮ್ಮ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ರಾಜಕೀಯ ಲಾಭಕ್ಕಾಗಿ ನನ್ನ ಮಗಳ ಸಾವಿನೊಂದಿಗೆ ಆಟವಾಡುತ್ತಿದ್ದಾರೆ" ಎಂದು ಹೇಳಿದರು.
"ಸತತ 7 ವರ್ಷಗಳಿಂದ ನ್ಯಾಯಕ್ಕಾಗಿ ನನ್ನ ಕುಟುಂಬವು ಹೋರಾಟ ನಡೆಸುತ್ತಿದೆ. ಆದರೂ ಸರ್ಕಾರ ನಮ್ಮ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಬದಲಾಗಿ ಅಪರಾಧಿಗಳ ಮನವಿಯನ್ನು ಕೇಳಲಾಗುತ್ತಿದೆ" ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನುದ್ದೇಶಿಸಿ ಮನವಿ ಮಾಡಿಕೊಂಡ ಆಶಾದೇವಿ ಅವರು, "ಮಹಿಳಾ ಸುರಕ್ಷತೆಯ ಬಗ್ಗೆ ಭರವಸೆ ನೀಡಿ 2014ರ ವೇಳೆ ನೀವು ಅಧಿಕಾರಕ್ಕೆ ಬಂದಿದ್ದೀರಿ. ದಯಮಾಡಿ ಜ.22ರಂದು ಅಪರಾಧಿಗಳನ್ನು ಗಲ್ಲಿಗೇರಿಸಿ" ಎಂದು ಹೇಳಿದ್ದಾರೆ.
"ರಾಜಕೀಯವಾಗಿ ನಾನು ಯಾವತ್ತೂ ಮಾತನಾಡಿಲ್ಲ. ಆದರೆ, 2012ರಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದವರೇ ಇಂದು ರಾಜಕೀಯದ ಲಾಭಕೋಸ್ಕರ ನನ್ನ ಮಗಳ ಸಾವಿನ ಜೊತೆ ಆಟವಾಡುತ್ತಿದ್ದಾರೆ" ಎಂದು ಹೇಳಿದರು.