ಭೋಪಾಲ್, ಜ.17 (Daijiworld News/PY) : ಹೆಲ್ಮೆಟ್ ಧರಿಸದೇ ಸಿಕ್ಕಿಬಿದ್ದ ದ್ವಿಚಕ್ರ ವಾಹನ ಸವಾರರಿಗೆ ಮಧ್ಯಪ್ರದೇಶದ ಸಂಚಾರ ಪೊಲೀಸರು ಹೊಸ ರೀತಿಯ ಶಿಕ್ಷೆ ನೀಡಿದ್ದಾರೆ.
ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಏಕೆ ಧರಿಸುವುದಿಲ್ಲ ಎಂಬ ಕುರಿತಾಗಿ 100 ಪದಗಳ ಪ್ರಬಂಧವನ್ನು ಬರೆಯುವಂತೆ ಪೊಲೀಸರು ಹೇಳಿದ್ದಾರೆ.
ಕಳೆದ 6 ದಿನಗಳಲ್ಲಿ ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡುತ್ತಿದ್ದ 150ಕ್ಕೂ ಹೆಚ್ಚು ಸವಾರರಿಗೆ ಪೊಲೀಸರು 100 ಪದಗಳ ಪ್ರಬಂಧವನ್ನು ಬರೆಸಿದ್ದು, ಸಂಚಾರ ನಿಯಮವನ್ನು ಪಾಲಿಸುವ ಸಲುವಾಗಿ ಈ ಕೆಲಸವನ್ನು ಮಾಡುತ್ತಿದ್ದಾರೆ.
ಜ.11 ರಿಂದ ಜ.17ರವರೆಗೆ ನಡೆಯುತ್ತಿದ್ದ ರಸ್ತೆ ಸುರಕ್ಷತಾ ವಾರದಲ್ಲಿ, ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದವರನ್ನು ತಡೆದು ಭೋಪಾಲ್ ಪೊಲೀಸರು ಯಾಕೆ ರಸ್ತೆ ನಿಯಮಗಳನ್ನು ಉಲ್ಲಂಘಿಸುತ್ತಿದ್ದೀರಿ ಎಂಬುದನ್ನು ವಿವರಿಸಲು 100 ಪದಗಳಲ್ಲಿ ಪ್ರಬಂಧವನ್ನು ಬರೆಯುವಂತೆ ಹೇಳಲಾಗುತ್ತಿದೆ ಎಂದು ಎಎಸ್ಪಿ ಪ್ರದೀಪ್ ಚೌಹಾನ್ ತಿಳಿಸಿದ್ದಾರೆ.
ದ್ವಿಚಕ್ರ ವಾಹನ ಸವಾರರ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸುವುದು ತುಂಬಾ ಮುಖ್ಯ, ಆದರೆ ಸವಾರರು ನಿಯಮವನ್ನು ಉಲ್ಲಂಘಿಸಿ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುತ್ತಿದ್ದಾರೆ.
ಜ.11 ರಿಂದ ಜ.17ರವರೆಗೆ ನಡೆಯುತ್ತಿದ್ದ ರಸ್ತೆ ಸುರಕ್ಷತಾ ವಾರ ಮುಗಿದ ಬಳಿಕವೂ ಇದನ್ನು ಮುಂದುವರೆಸುತ್ತೇವೆ ಎಂದು ಪ್ರದೀಪ್ ಚೌಹಾನ್ ಹೇಳಿದ್ದಾರೆ.
ಕಳೆದ 6 ದಿನಗಳಲ್ಲಿ ಭೋಪಾಲ್ ಸಂಚಾರ ಪೊಲೀಸರು ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ರ್ಯಾಲಿಯನ್ನು ನಡೆಸಿದ್ದು, ಟ್ರಾಫಿಕ್ ನಿಯಮಗಳ ಬಗ್ಗೆ ತಿಳಿಸಲು ಸ್ಥಳೀಯ ನಿವಾಸಿಗಳಿಗೆ ಕರಪತ್ರಗಳನ್ನು ವಿತರಿಸಿದ್ದಾರೆ.