ಬೆಂಗಳೂರು, ಜ 17 (Daijiworld News/MB) : ಇನ್ನೂ ಹಲವು ಕಾಂಗ್ರೆಸ್ ಜೆಡಿಎಸ್ ನಾಯಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ. ಆದರೂ ಕಾಂಗ್ರೆಸ್ ಜೆಡಿಎಸ್ ಎಚ್ಚೆತ್ತುಕೊಳ್ಳದಿದ್ದರೆ ಕರ್ನಾಟಕ ರಾಜ್ಯದಲ್ಲಿ ಈ ಎರಡು ಪಕ್ಷಗಳು ನಿರ್ನಾಮವಾಗುತ್ತದೆ ಎಂದು ಬಿಜೆಪಿ ಸಂಸದರಾದ ಎ.ನಾರಾಯಣಸ್ವಾಮಿ ತಿಳಿಸಿದ್ದಾರೆ.
ನಗರದ ಹೊರವಲಯ ಆನೇಕಲ್ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್, ಜೆಡಿಎಸ್ನ 17 ಶಾಸಕರು ಬಿಜೆಪಿಗೆ ಬರುವ ಮೊದಲು ಬಿ ಎಸ್ ಯಡಿಯೂರಪ್ಪ ಹಲವು ಬಾರಿ ಶಾಸಕರು ಬಿಜೆಪಿಗೆ ಬರುತ್ತಾರೆ ಎಚ್ಚರಿಕೆ ವಹಿಸಿ ಎಂದು ಹೇಳಿದ್ದರು. ಆದರೆ ಅವರು ಕೇಳಲಿಲ್ಲ. ಈಗ ಪುನಃ ಬಿಎಸ್ವೈ ತಿಳಿಸಿದ್ದಾರೆ. ಎಚ್ಚೆತ್ತುಕೊಳ್ಳದಿದ್ದಲ್ಲಿ ಕಾಂಗ್ರೆಸ್ ಜೆಡಿಎಸ್ ಶಾಸಕರು ಬಿಜೆಪಿಗೆ ಸೇರುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ದೆಹಲಿ ಚುನಾವಣೆ ಹಾಗೂ ಮಾಜಿ ಸಚಿವ ಎಂಟಿಬಿ ನಾಗರಾಜ್ ಹಾಗೂ ಎಚ್.ವಿಶ್ವನಾಥ್ ಅವರ ಎರಡು ಸ್ಥಾನಗಳ ಗೊಂದಲದಿಂದ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಕಾಲಾವಕಾಶ ಪಡೆದುಕೊಂಡಿದೆ. ಮುಕ್ತವಾಗಿ ಅವರೊಂದಿಗೆ ಚರ್ಚೆ ಮಾಡಿ ಶೀಘ್ರದಲ್ಲೇ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಜೆಡಿಎಸ್ನಿಂದ ಬಿಜೆಪಿಗೆ ಬಂದ 17 ಶಾಸಕರಲ್ಲಿ ಯಾವುದೇ ಅಸಮಾಧಾನವಿಲ್ಲ. ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಳಿತ ಮೆಚ್ಚಿದ್ದಾರೆ. ಅವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಸ್ಥಾನಮಾನ ನೀಡಲಾಗುವುದು ಎಂದರು.
ದೇಶದಲ್ಲಿ ಭಯೋತ್ಪಾದನೆ ನಡೆಯುತ್ತಿರುವ ಸಾಕ್ಷಿಗಳು ಪತ್ತೆಯಾಗುತ್ತಿದೆ. ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದಿಂದ ಭಾರತಕ್ಕೆ ನುಸುಳುಕೋರರು ಬಂದಿದ್ದಾರೆ ಎಂಬುದು ವಿಶ್ವಕ್ಕೆ ತಿಳಿದಿದೆ. ಆ ಹಿನ್ನಲೆಯಲ್ಲಿ ಸಿಎಎ ಹಾಗೂ ಎನ್.ಆರ್.ಸಿ ಕಾಯ್ದೆಯನ್ನು ಭಾರತದಲ್ಲಿ ಜಾರಿಮಾಡಲಾಗಿದೆ. ಬೆಂಗಳೂರಿನಲ್ಲೂ ಶಂಕಿತ ಭಯೋತ್ಪಾದಕರು ಪತ್ತೆಯಾಗಿದ್ದಾರೆ ಎಂದು ಹೇಳಿದರು.
ದೇಶದಲ್ಲಿ ಭಯೋತ್ಪಾದಕರ ಹಾವಳಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನಾನು ಕಾಂಗ್ರೆಸ್ ಪಕ್ಷದವವರು ಈ ಭಯೋತ್ಪಾದಕರು ಅಲ್ಪಸಂಖ್ಯಾತರಲ್ಲ ಹಾಗೂ ಪಾಕ್ ಬಾಂಗ್ಲಾ ದೇಶದಿಂದ ಬಂದವರಲ್ಲ ಎಂದು ಹೇಳಲಿ ಎಂದು ಸವಾಲು ಹಾಕಿದರು.