ನವದೆಹಲಿ, ಜ.17 (Daijiworld News/PY) : ದೇಶವನ್ನು ಬೆಚ್ಚಿ ಬೀಳಿಸಿದ್ದ ನಿರ್ಭಯಾ ಗ್ಯಾಂಗ್ ರೇಪ್ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಅಪರಾಧಗಳನ್ನು ಫೆ.1ರ ಬೆಳಗ್ಗೆ 6ಗಂಟೆಗೆ ಗಲ್ಲಿಗೇರಿಸುವಂತೆ ದೆಹಲಿ ಕೋರ್ಟ್ ಶುಕ್ರವಾರ ಹೊಸ ಡೆತ್ ವಾರಂಟ್ ಹೊರಡಿಸಿದೆ ಎಂದು ವರದಿ ತಿಳಿಸಿದೆ.
ನಿರ್ಭಯಾ ಪ್ರಕರಣದ ಅಪರಾಧಿಗಳಲ್ಲಿ ಓರ್ವನಾದ ಮುಕೇಶ್ ಸಿಂಗ್ ಎಂಬಾತ ಕ್ಷಮಾದಾನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರಪತಿ ವಜಾಗೊಳಿಸಿದ್ದು, ಅರ್ಜಿ ವಜಾಗೊಳಿಸಿದ ಬಳಿಕ 14 ದಿನಗಳ ಕಾಲಾವಕಾಶ ನೀಡಬೇಕು ಎಂಬುದಾಗಿಕಾನೂನು ಇರುವ ಹಿನ್ನೆಲೆಯಲ್ಲಿ ಇದೀಗ ದೆಹಲಿ ಕೋರ್ಟ್ ನಿರ್ಭಯಾ ಪ್ರಕರಣದ ನಾಲ್ವರೂ ಅಪರಾಧಿಗಳನ್ನು ಫೆ.1ರಂದು ಬೆಳಗ್ಗೆ 6ಗಂಟೆಗೆ ಗಲ್ಲಿಗೇರಿಸುವಂತೆ ಹೊಸ ಡೆತ್ ನೋಟ್ ಹೊರಡಿಸಿದೆ ಎನ್ನಲಾಗಿದೆ.
ಈ ಮೊದಲು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಜ.22ರಂದು ಬೆಳಗ್ಗೆ 7ಗಂಟೆಗೆ ನಾಲ್ವರೂ ಅಪರಾಧಿಗಳನ್ನು ಗಲ್ಲಿಗೇರಿಸುವಂತೆ ಡೆತ್ ವಾರಂಟ್ ಹೊರಡಿಸಿತ್ತು. ಆದರೆ ಅಪರಾಧಿ ಮುಕೇಶ್ ಸಿಂಗ್ ಕ್ಷಮಾದಾನ ಅರ್ಜಿ ನೀಡಿದ್ದ ಕಾರಣದಿಂದ ಜ.22ರಂದು ಗಲ್ಲಿಗೇರಿಸುವುದಕ್ಕೆ ತಡೆ ನೀಡಬೇಕೆಂದು ಹೇಳಿ ದೆಹಲಿ ಸರ್ಕಾರ ಕೋರ್ಟ್ಗೆ ಮನವಿ ಮಾಡಿತ್ತು.