ಬೆಂಗಳೂರು, ಜ 17(DaijiworldNews/SM): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಶನಿವಾರದಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಚಟುವಟಿಕೆ ಚುರುಕುಗೊಂಡಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದವರು ಸಚಿವರಾಗುವ ಕಾಲ ಕೂಡಿ ಬರುವ ಸಮಯ ಹತ್ತಿರವಾಗಿದೆ.
ರಾಷ್ಟ್ರೀಯ ಅಧ್ಯಕ್ಷರಿಗೆ ರಾಜ್ಯಕ್ಕೆ ಸ್ವಾಗತ ಕೋರಲು ಸಿಎಂ ಯಡಿಯೂರಪ್ಪ ಸಕಲ ರೀತಿಯಲ್ಲಿ ಸಿದ್ದತೆ ನಡೆಸಿದ್ದಾರೆ. ಗೃಹ ಸಚಿವರ ಬರುವಿಕೆಗೆ ಎದುರು ನೋಡುತ್ತಿದ್ದಾರೆ. ಅಲ್ಲದೆ, ಶನಿವಾರದ ಎಲ್ಲಾ ಕಾರ್ಯಕ್ರಮಗಳನ್ನು ಸಿಎಂ ರದ್ದುಗೊಳಿಸಿದ್ದಾರೆ. ಮತ್ತೊಂದೆಡೆ ಸಂಪುಟ ವಿಸ್ತರಣೆ ಮಾಡಲೇ ಬೇಕೆಂಬ ನಿರ್ಧಾರಕ್ಕೆ ಸಿಎಂ ಬಂದಿದ್ದು, ಅಮಿತ್ ಶಾ ರಾಜ್ಯ ಭೇಟಿ ಸಂದರ್ಭ ಅವರನ್ನು ಮನವೊಲಿಸಲು ಸಕಲ ರೀತಿಯಲ್ಲೂ ಸಿದ್ದರಾಗಿದ್ದಾರೆ.
ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಕಾರಣರಾದವರಿಗೆ ಸಚಿವ ಸ್ಥಾನ ನೀಡುವ ಉದ್ದೇಶ ಸಿಎಂ ಅವರದಾಗಿದ್ದಾರೆ, ಪಕ್ಷಕ್ಕಾಗಿ ಪ್ರಾಮಾಣಿಕ ಸೇವೆ ನೀಡುವವರಿಗೆ ಸಚಿವ ಸ್ಥಾನ ನೀಡಲೇ ಬೇಕು ಎಂಬುವುದು ರಾಷ್ಟ್ರೀಯ ಅಧ್ಯಕ್ಷರ ನಿಲುವಾಗಿದೆ. ಆದರೆ ಅಂತಿಮವಾಗಿ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುವುದು ಕುತೂಹಲವಾಗಿದೆ.
ಅಮಿತ್ ಶಾ ನಾಳೆ ಬೆಳಿಗ್ಗೆ ವಿಶೇಷ ವಿಮಾನದಲ್ಲಿ ಯಲಹಂಕ ವಾಯುನೆಲೆಗೆ ಆಗಮಿಸಲಿದ್ದು, ಮಧ್ಯಾಹ್ನ 1 ಗಂಟೆಗೆ ನಗರದ ಅರಮನೆ ಮೈದಾನದಲ್ಲಿ ವೇದಾಂತ ಭಾರತಿ ಸಂಸ್ಥೆ ಆಯೋಜಿಸಿರುವ ‘ವಿವೇಕ ದೀಪಿಣಿ’ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸಂಜೆ 4 ಗಂಟೆಗೆ ಹುಬ್ಬಳ್ಳಿಯಲ್ಲಿ ರಾಜ್ಯ ಬಿಜೆಪಿ ಆಯೋಜಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಜಾಗೃತಿ ಸಮಾಜವೇಶದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಹುಬ್ಬಳ್ಳಿಯಲ್ಲೇ ವಾಸ್ತವ್ಯ ಹೂಡಿ ಭಾನುವಾರ ಬೆಳಿಗ್ಗೆ ಹುಬ್ಬಳ್ಳಿಯಿಂದಲೇ ದೆಹಲಿಗೆ ವಾಪಸ್ ಆಗಲಿದ್ದಾರೆ.