ಬೆಂಗಳೂರು, ಜ 18 (Daijiworld/MB) : 'ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಹಾಗೂ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಸಂಘಟನೆಗಳು ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸುತ್ತಿರುವ ಹಿನ್ನಲೆಯಲ್ಲಿ ಈ ಎರಡು ಸಂಘಟನೆಗಳನ್ನು ನಿಷೇಧಿಸಲು ನಿರ್ಧರಿಸಲಾಗಿದೆ. ಎಸ್ಡಿಪಿಐ, ಪಿಎಫ್ಐ ನಿಷೇಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ' ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 'ಈಗಾಗಲೇ ಈ ಕುರಿತು ಕ್ರಮ ಕೈಗೊಳ್ಳಲಾಗುತ್ತಿದ್ದು, ಪೊಲೀಸರಿಂದ ಈ ಎರಡು ಸಂಘಟನೆಗಳ ಕುರಿತಾದ ವರದಿ ಸಲ್ಲಿಸುವಂತೆ ಸೂಚಿಸಿದ್ದೇವೆ. ವರದಿ ದೊರೆತ ಕೂಡಲೇ ಈ ಬಗ್ಗೆ ಕಾನೂನು ಇಲಾಖೆಯೊಂದಿಗೆ ಚರ್ಚೆ ನಡೆಸಿ ಕೇಂದ್ರಕ್ಕೆ ಸಲ್ಲಿಸಲಾಗುವುದು' ಎಂದು ಅವರು ಹೇಳಿದ್ದಾರೆ.
'ಈ ಸಂಘಟನೆಗಳು ರಾಜ್ಯದ ಹಲವು ಭಾಗಗಳಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ, ಮಂಗಳೂರಿನಲ್ಲಿ ಹಿಂಸಾಚಾರಕ್ಕೆ ಹಾಗೂ ಮೈಸೂರಿನಲ್ಲಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರ ಹತ್ಯೆ ಯತ್ನಕ್ಕೆ ಕಾರಣವಾಗಿದೆ. ಈ ಸಂಘಟನೆಗಳು ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಗಳ ಮಾಹಿತಿ ಲಭಿಸಿದೆ. ಈ ಹಿಂದಿನ ಸರ್ಕಾರ ಈ ಎರಡು ಸಂಘಟನೆಗಳ ಮೇಲಿದ್ದ ಗಂಭೀರ ಪ್ರಕರಣಗಳನ್ನು ಕೈಬಿಟ್ಟ ಬಳಿಕ ಇಂತಹ ಚಟುವಟಿಕೆ ಇನ್ನಷ್ಟು ಹೆಚ್ಚಾಗಿವೆ' ಎಂದಿದ್ದಾರೆ.
'ಉಗ್ರವಾದಿ ಗುಂಪು ಎಂದು ಗುರುತಿಸಲಾಗಿರುವ ಸಿಮಿ ನಿಷೇಧವಾದ ಬಳಿಕ ಬೇರೆ ಬೇರೆ ಹೆಸರಿನಲ್ಲಿ ಸಂಘಟನೆ ಕಟ್ಟಿಕೊಂಡು ಭಯೋತ್ಪಾದನಾ ಚಟುವಟಿಕೆ ಆರಂಭಿಸಿವೆ. ವಿದೇಶಿ ಭಯೋತ್ಪಾದಕ ಸಂಘಟನೆಗಳ ಜತೆಗೂ ಪಿಎಫ್ಐ, ಎಸ್ಡಿಪಿಐ ಸಂಘಟನೆಗಳು ನಂಟು ಹೊಂದಿರುವುದು ತಿಳಿದು ಬಂದಿದೆ. ಇನ್ನೂ ಕೆಲವು ಸಣ್ಣ ಗುಂಪುಗಳಿದ್ದು ಅವುಗಳ ಮೇಲೂ ನಿಗಾ ಇಡಲಾಗಿದೆ' ಎಂದು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಎಸ್ಡಿಪಿಐನ ರಾಜ್ಯ ಮಾಧ್ಯಮ ಉಸ್ತುವಾರಿ ಅಬ್ರಾರ್ ಅಹ್ಮದ್, 'ಎಸ್ಡಿಪಿಐಗೂ ಹಲ್ಲೆ ಘಟನೆಗೂ ಯಾವುದೇ ಸಂಬಂಧವಿಲ್ಲ. ಜನರ ದಿಕ್ಕು ತಪ್ಪಿಸುವ ಉದ್ದೇಶದಿಂದ ಈ ಘಟನೆಯೊಂದಿಗೆ ಸಂಬಂಧ ಕಲ್ಪಿಸಲಾಗುತ್ತಿದೆ' ಎಂದು ಹೇಳಿದ್ದಾರೆ.