ಚಿಕ್ಕಮಗಳೂರು, ಜ 18 (Daijiworld/MB) : ಯಾವ ದೇಶದಲ್ಲೂ ವೀಸಾದ ಸಮಯ ಮುಗಿದ ನಂತರ ಉಳಿಯುವಂತಿಲ್ಲ. ಯಾವುದೇ ದಾಖಲೆ ಇಲ್ಲದೆಯೇ ಭಾರತಕ್ಕೆ ಬಂದರೆ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಚಿಕ್ಕಮಗಳೂರಿನ ರಾಷ್ಟ್ರ ಜಾಗರಣಾ ಸಮಿತಿ ವತಿಯಿಂದ ನಗರದಲ್ಲಿ ನಡೆದ ಪೌರತ್ವ ಕಾಯ್ದೆ ಕುರಿತ ಜನ ಜಾಗರಣಾ ಸಮಾವೇಶದಲ್ಲಿ ಮಾತನಾಡಿದ ಅವರು, ವಿಶ್ವದ ಸಾಕಷ್ಟು ಜನಾಂಗಗಳಿಗೆ ಭಾರತ ಮೊದಲಿನಿಂದಲೂ ಆಶ್ರಯ ನೀಡಿದೆ. ಹಾಗೆಯೇ ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರಿಗೂ ಪೌರತ್ವ ನೀಡಲಾಗುತ್ತದೆ ಎಂದು ಹೇಳಿದರು.
ಪೌರತ್ವ ಕಾಯ್ದೆಯಡಿ ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲಾಗುತ್ತದೆಯೇ ಹೊರತು ಇದರಿಂದಾಗಿ ಭಾರತದಲ್ಲಿರುವ ಯಾರಿಗೂ ಯಾವುದೇ ರೀತಿಯಲ್ಲೂ ತೊಂದರೆ ಆಗುವುದಿಲ್ಲ. ಭಾರತೀಯರ ಪೌರತ್ವಕ್ಕೂ ಯಾವ ಸಮಸ್ಯೆ ಉಂಟಾಗುವುದಿಲ್ಲ ಎಂದು ತಿಳಿಸಿದರು.