ಜೈಪುರ, ಜ 18 (Daijiworld/MB) : ರಾಜಸ್ಥಾನದಲ್ಲಿ ನಡೆಯುತ್ತಿರುವ ಪಂಚಾಯತ್ ಚುನಾವಣೆಯ ಮೊದಲ ಹಂತದಲ್ಲಿ ಸಿಂಧ್ ಪ್ರಾತ್ಯದಿಂದ 18 ವರ್ಷಗಳ ಹಿಂದೆ ಭಾರತಕ್ಕೆ ವಲಸೆ ಬಂದಿರುವ ಪಾಕಿಸ್ತಾನ ಮೂಲದ ಮಹಿಳೆ ನೀತಾ ಸೋಧಾ ಅವರು ಟೋಂಕ್ ಜಿಲ್ಲೆಯ ನಟ್ವಾರ ಪಂಚಾಯತ್ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.
ನೀತಾ ಸೋಧಾ ತನ್ನ ಪ್ರತಿಸ್ಪರ್ಧಿ ಸೋನಾ ದೇವಿಯವರನ್ನು 400 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ರಾಜಸ್ತಾನ ರಾಜ್ಯದಲ್ಲಿ 2726 ಗ್ರಾಮ ಪಂಚಾಯತ್ಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆದಿದ್ದು, 17 ಸಾವಿರ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಪಾಕಿಸ್ತಾನದಿಂದ ವಲಸೆ ಬಂದಿರುವ ಈ ಮಹಿಳೆ ಭಾರತದಲ್ಲಿ ಚುನಾವಣೆ ಸ್ಪರ್ಧೆ ಮಾಡುತ್ತಿರುವ ಹಿನ್ನಲೆಯಲ್ಲಿ ದೇಶದ ಗಮನ ಸೆಳೆದಿದ್ದಾರೆ.
ನೀತಾ ಸೋಧಾ ಅವರು 8ನೇ ತರಗತಿವರೆಗೆ ಪಾಕಿಸ್ತಾನದಲ್ಲಿ ಅಧ್ಯಯನ ಮಾಡಿದ್ದು 18 ವರ್ಷಗಳ ಹಿಂದೆ ಸಹೋದರಿ ಹಾಗೂ ತಾಯಿಯ ಜೊತೆ ಭಾರತಕ್ಕೆ ಪಾಕಿಸ್ತಾನದಿಂದ ಬಂದು ಅಜ್ಮೀರ್ ಸೋಫಿಯಾ ಕಾಲೇಜನಲ್ಲಿ ಬಿಎ ಪದವಿಯನ್ನು ಪಡೆದಿದ್ದಾರೆ. ರಜಪೂತ ಕುಟುಂಬದ ವ್ಯಕ್ತಿಯನ್ನು ಮದುವೆಯಾಗಿದ್ದು ನಾಲ್ಕು ತಿಂಗಳ ಹಿಂದೆಯಷ್ಟೆ ಪೌರತ್ವ ಲಭಿಸಿದೆ. ಅವರ ಮಾವ ರಾಜಕೀಯ ಜೀವನಕ್ಕೆ ಸ್ಪೂರ್ತಿ ಎಂದು ಅವರು ತಿಳಿಸಿದ್ದಾರೆ.
ಈ ಚುನಾವಣೆಯಲ್ಲಿ ನನಗೆ ಜಯ ನೀಡಿದಕ್ಕಾಗಿ ನಾನು ಗ್ರಾಮದ ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ. ಈ ಚುನಾವಣೆಗೆ ಮುಖ್ಯವಾಗಿ ನನ್ನ ಮಾವ ದೊಡ್ಡ ಪ್ರಯಾಣದಲ್ಲಿ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಶಿಕ್ಷಣ, ಮಹಿಳೆಯರ ಸಬಲೀಕರಣ, ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಅವರು ತಿಳಿಸಿದ್ದಾರೆ.