ಬೆಂಗಳೂರು, ಜ 18 (Daijiworld/MB) : ಕೇರಳ ಪ್ರವಾಸೋದ್ಯಮ ಇಲಾಖೆ ಮಾಡಿದ ಗೋ ಮಾಂಸ ಖಾದ್ಯದ ಟ್ವೀಟ್ ಅನ್ನು ವೆಲ್ ಕಮ್ ಕರ್ನಾಟಕ ಎಂದು ಬರೆದು ರೀ ಟ್ವೀಟ್ ಮಾಡಿದ್ದ ಸಚಿವ ಸಿ.ಟಿ ರವಿ ಈಗ ತುಳು ನಾಡು ಖಾದ್ಯದ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ಟೂರಿಸಂ ಹ್ಯಾಷ್ ಟ್ಯಾಗ್ ಹಾಕಿ ಟ್ವೀಟ್ ಮಾಡಿರುವ ಅವರು, "ನಿಮ್ಮಲ್ಲಿರುವ ಸಸ್ಯಾಹಾರಿಗಳನ್ನು ಹೊರಗೆ ತರಲು ಕರ್ನಾಟಕಕ್ಕೆ ಸುಸ್ವಾಗತ" ಎಂದು ಟ್ವೀಟ್ ಮಾಡಿದ್ದಾರೆ.
ತುಳುನಾಡಿನ ರುಚಿಗಳನ್ನು ಆನಂದಿಸಿ, ಪಥ್ರೊಡೆ, ಕೊಟ್ಟೆ ಕಡುಬು, ಹಲಸಿನ ಹಣ್ಣಿನ ಗಟ್ಟಿ, ಅವಲಕ್ಕಿ ಉಪ್ಪುಕರಿ, ಬದನೆಕಾಯಿ ಮೊಸರು ಗೊಜ್ಜು ಹಾಗೂ ಬಾಯಿಚಪ್ಪರಿಸಿ ತಿನ್ನುವ ಅಧಿಕೃತ ಆಹಾರಗಳು ಎಂದು ಬರೆದಿದ್ದಾರೆ.
ಹಾಗೆಯೇ ಮೈಸೂರಿನ ಮುದ್ದೆ ನಾಟಿ ಕೋಳಿ ಸಾರಿನ ಫೋಟೋ ಅಪ್ಲೋಡ್ ಮಾಡಿ, ಇದನ್ನು ತಿಂದರೆ ನೀವು ಇನ್ನೂ ಬೇಕೆಂದು ಕೇಳುವಿರಿ ಎಂದು ಬರೆದಿದ್ದಾರೆ.
ಈ ಮೊದಲು ಕೇರಳ ಪ್ರವಾಸೋದ್ಯಮ ಇಲಾಖೆ ಟ್ವೀಟ್ ಅನ್ನು ವೆಲ್ ಕಮ್ ಕರ್ನಾಟಕ ಎಂದು ಬರೆದು ಸಚಿವ ಸಿ.ಟಿ ರವಿ ರೀ ಟ್ವೀಟ್ ಮಾಡಿದ್ದರು. ಈ ಟ್ವೀಟ್ ವ್ಯಾಪಕ ಚರ್ಚೆಗೆ ಕಾರಣವಾದಾಗ 'ನಾನು ಗೋಮಾಂಸವನ್ನು ಬೆಂಬಲಿಸುತ್ತೇನೆ ಎಂದು ನೀವು ಹೇಗೆ ಯೋಚಿಸಿದಿರಿ? ಅದು ನನ್ನ ನಂಬಿಕೆಗೆ ವಿರುದ್ಧವಾಗಿದೆ. ಕೇರಳ ಪ್ರವಾಸೋದ್ಯಮದ ಟ್ವೀಟ್ನಿಂದ ನಿಮ್ಮಲ್ಲಿ ಅನೇಕರಿಗೆ ನೋವಾಗಿದೆ ಎಂದು ನನಗೆ ಗೊತ್ತು. ನನ್ನ ಟ್ವೀಟ್ ವ್ಯಂಗ್ಯಾತ್ಮಕ ಮತ್ತು ಅದರ ವಿರುದ್ಧದ ಮೌನ ಪ್ರತಿಭಟನೆಯಾಗಿತ್ತು. ಹೀಗಾಗಿ ನಿಮ್ಮನ್ನು ಕರ್ನಾಟಕಕ್ಕೆ ಬರುವಂತೆ ಸ್ವಾಗತಿಸಿದ್ದೆ' ಎಂದು ಹೇಳಿದ್ದರು.