ಧಾರವಾಡ, ಜ.18 (Daijiworld News/PY) : "ಅಂಬೇಡ್ಕರ್ ಅವರು ಸಂವಿಧಾನ ಬರೆದಿರಬಹುದು ಆದರೆ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಸಂವಿಧಾನ ತಜ್ಞರಲ್ಲ" ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, "ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ವಾಜಪೇಯಿ ಕಾಲದಲ್ಲಿಯೂ ಚರ್ಚೆಯಾಗಿತ್ತು, ಆದರೆ ಕಾಯ್ದೆ ಪಾಸ್ ಆಗಿರಲಿಲ್ಲ, ಮನಮೋಹನ್ ಸಿಂಗ್ ಕಾಲದಲ್ಲಿಯೂ ಚರ್ಚೆ ನಡೆದಾಗ ವಿರೋಧ ವ್ಯಕ್ತವಾಗಿಲ್ಲ. ಇಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಕಾಲದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪಾಸ್ ಆಗಿದ್ದು, ಲೋಕಸಭೆ ವಿರೋಧಿಸಿಲ್ಲ. ದೇಶ ಬೇಕು ಪೌರತ್ವ ಬೇಡ ಎಂದರೆ ಹೇಗೆ" ಎಂದು ಹೇಳಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ವಿರೋಧಿಸಿದ ಪ್ರಕಾಶ್ ಅಂಬೇಡ್ಕರ್ ಅವರ ವಿಚಾರವಾಗಿ ಮಾತನಾಡಿದ ಕಾರಜೋಳ, "ಅಂಬೇಡ್ಕರ್ ಅವರು ಸಂವಿಧಾನ ಬರೆದಿರಬಹುದು ಆದರೆ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಸಂವಿಧಾನ ತಜ್ಞರಲ್ಲ" ಎಂದರು.
ಸಂಪುಟ ವಿಸ್ತರಣೆಯ ಬಗ್ಗೆ ಮಾತನಾಡಿದ ಅವರು, "ಸಚಿವ ಸಂಪುಟದ ವಿಚಾರವಾಗಿ ಚರ್ಚೆ ನಡೆಯುತ್ತದೋ ಇಲ್ಲವೋ ಗೊತ್ತಿಲ್ಲ ಆದರೆ, ಅಮಿತ್ ಶಾ ಅವರು ಸಿಎಂ ಯಡಿಯೂರಪ್ಪ ಅವರಿಗೆ ಅವಕಾಶ ನೀಡಿದರೆ ಚರ್ಚೆ ನಡೆಯುತ್ತದೆ" ಎಂದು ತಿಳಿಸಿದರು.