ನವದೆಹಲಿ, ಜ 18 (Daijiworld/MB) : ಎನ್ಪಿಆರ್ಗೆ ತಂದೆ ಹಾಗೂ ತಾಯಿಯ ಜನನ ಸ್ಥಳದ ಮಾಹಿತಿ ಮೊದಲಾದವುಗಳಿಗೂ ಕಡ್ಡಾಯವಾಗಿ ಉತ್ತರಿಸಬೇಕಾಗಿಲ್ಲ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.
ಎನ್ಪಿಆರ್ಗೆ ತಂದೆ ಹಾಗೂ ತಾಯಿಯ ಜನನ ಸ್ಥಳದ ಮಾಹಿತಿ ನೀಡಬೇಕಾಗಿರುವುದಕ್ಕೆ ಹಲವು ರಾಜ್ಯಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ ಈ ಕುರಿತಾದ ಸ್ಪಷ್ಟನೆ ನೀಡಿದೆ.
ಎನ್ಪಿಆರ್ ಹಾಗೂ 2020ರ ಜನಗಣತಿಯ ಕುರಿತು ಚರ್ಚೆ ನಡೆಸಲು ಶುಕ್ರವಾರ ದೆಹಲಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಎ.ಕೆ.ಭಲ್ಲಾ ಹಾಗೂ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಭಾಗವಹಿಸಿದ್ದ ರಾಜಸ್ಥಾನ ಮುಖ್ಯ ಕಾರ್ಯದರ್ಶಿ ಡಿ.ಬಿ. ಗುಪ್ತಾ ಹಾಗೂ ಕೆಲವು ರಾಜ್ಯಗಳ ಪ್ರತಿನಿಧಿಗಳು ಎನ್ಪಿಆರ್ನಲ್ಲಿ ಕೇಳಲಾಗುವ ಕೆಲವು ಪ್ರಶ್ನೆಗಳ ಕುರಿತು ಆಕ್ಷೇಪ ವ್ಯಕ್ತ ಪಡಿಸಿದರು.
ಹೆತ್ತವರ ಜನನ ಸ್ಥಳ ಕೇಳುವುದು ಸರಿಯಲ್ಲ. ಹಲವರಿಗೆ ತಾವು ಹುಟ್ಟಿದ ಸ್ಥಳದ ಬಗ್ಗೆ ತಿಳಿದಿಲ್ಲ. ಈ ರೀತಿ ಪ್ರಶ್ನೆ ಕೇಳಿ ಏನು ಪ್ರಯೋಜನ. ಹಾಗಾಗಿ ಈ ಪ್ರಶ್ನೆಗಳನ್ನು ಕೇಳಬಾರದು ಎಂದು ಹೇಳಿರುವುದಾಗಿ ಗುಪ್ತಾ ಅವರು ತಿಳಿಸಿದ್ದಾರೆ.
ಈ ಹಿಂದೆ ಕೂಡಾ ಈ ರೀತಿಯ ಪ್ರಶ್ನೆಗಳನ್ನು ಕೇಳಿದ್ದಾರೆ. ಜನರು ಈ ಪ್ರಶ್ನೆಗಳಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕಾಗಿಲ್ಲ. ಹಾಗೆಯೇ ಉತ್ತರಿಸುವಂತೆ ಒತ್ತಾಯ ಮಾಡಬಾರದು ಎಂದು ಅಧಿಕಾರಿಗಳು ಹೇಳಿದರು.