ಬೆಂಗಳೂರು, ಜ.18 (Daijiworld News/PY) : "ಪ್ರಧಾನಿ ನರೆಂದ್ರ ಮೋದಿ ಅವರು ಭಾರತೀಯ ಸಂಸ್ಕೃತಿ ಹಾಗೂ ಸಂಪ್ರದಾಯದ ಪ್ರತೀಕ" ಎಂದು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಹೇಳಿದ್ದಾರೆ.
ಶನಿವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿವೇಕದೀಪಿನಿ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅಮಿತ್ ಶಾ ಅವರು, "ಶಂಕರಾಚಾರ್ಯರ ಪ್ರಶ್ನೋತ್ತರ ರತ್ನ ಮಾಲೀಕಾವನ್ನು ಅಭ್ಯಾಸ ಮಾಡುವುದರಿಂದ ನಮ್ಮ ಜೀವನವೇ ಬದಲಾಗುತ್ತದೆ. ಈ ಶ್ಲೋಕಗಳ ಒಳಾರ್ಥ ತಿಳಿಯುವುದರಿಂದ ನಾವು ಎಂದು ಕೆಟ್ಟ ಹಾದಿಯಲ್ಲಿ ಸಾಗುವುದಿಲ್ಲ. ಇದರಿಂದ ಲೋಕ ಕಲ್ಯಾಣ ಸಾಧ್ಯವಾಗುತ್ತದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು 23 ಭಾಷೆಗಳಲ್ಲಿ ಭಾಷಾಂತರಿಸಿ ರಾಷ್ಟ್ರದ ಮೂಲೆ ಮೂಲೆಗಳಿಗೆ ನೀಡುವ ಕಾರ್ಯವನ್ನು ಮಾಡಿದ್ದಾರೆ "ಎಂದರು.
"ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಸಂಸ್ಕೃತಿ ಹಾಗೂ ಸಂಪ್ರದಾಯದ ಪ್ರತೀಕವಾಗಿ ಜಗತ್ತಿನಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೊದಲು ವಾರಣಾಸಿಯಲ್ಲಿ ಗಂಗಾ ಸ್ನಾನ ಮಾಡಿ, ಆರತಿಯಲ್ಲಿ ಭಾಗವಹಿಸಿದ್ದರು" ಎಂದು ಹೇಳಿದರು.
"ಶಿಕ್ಷಣದ ಜೊತೆ ವೇದ ಉಪನಿಷತ್ತು ಅಗತ್ಯ. ಈ ನಿಟ್ಟಿನಲ್ಲಿ ವೇದಾಂತ ಭಾರತಿ ಕಾರ್ಯ ನಿರ್ವಹಿಸುತ್ತಿದೆ. ನವಭಾರತವನ್ನು ನಿರ್ಮಿಸಲು ವೇದಾಂತ ಭಾರತಿ ಶ್ರಮಿಸುತ್ತಿದೆ. ವೇದಾಂತ ಭಾರತಿಯವರಿಗೆ ನನ್ನ ನಮನಗಳು. ರತ್ನಮಾಲಿಕೆ ಮಕ್ಕಳಿಗೆ ಪ್ರೇರಣೆಯಾಗಿದೆ. ವೇದಾಂತ ಭಾರತಿ ಬಗ್ಗೆ ಪ್ರಧಾನಿ ಮೋದಿ ಅವರಿಗೂ ವಿಶ್ವಾಸವಿದೆ. ವೇದಾಂತ ಭಾರತಿ ಸಂಸ್ಥೆ ಜೊತೆ ನಾವಿದ್ದೇವೆ" ಎಂದು ತಿಳಿಸಿದರು.
"ಶಾಲೆಗಳಲ್ಲಿ ವಿವೇಕದೀಪಿನಿ ಬೋಧಿಸಲು ಸರ್ಕಾರದ ಅನುಮತಿ ಬೇಕಿದೆ. ವಿವೇಕದೀಪಿನಿಯಲ್ಲಿನ ಅಂಶಗಳು ಸರ್ವಕಾಲಿಕ. ಭಾರತೀಯ ಸಂಸ್ಕೃತಿಯು ಅತ್ಯಂತ ಪ್ರಾಚೀನವಾದದ್ದು. ಜಗತ್ತೆ ಒಂದು ಕುಟುಂಬ ಅನ್ನೋ ಪ್ರತಿಪಾದನೆಯಿದೆ. ಶಂಕರಾಚಾರ್ಯರು ದೇಶದೆಲ್ಲೆಡೆ ಸಂಚರಿಸಿದ್ದಾರೆ. ಶಂಕರಾಚಾರ್ಯರ ಪ್ರಶ್ನೋತ್ತರ ಮಾಲಿಕೆಯ ಪ್ರಶ್ನೆಗಳು ಮತ್ತು ಅವರು ನೀಡಿರುವ ಉತ್ತರಗಳು ಪ್ರಸ್ತುತ ಕಾಲಕ್ಕೂ ಅನ್ವಯವಾಗುತ್ತದೆ. ಶಂಕರಾಚಾರ್ಯ ವಿರಚಿತ ಸೌಂದರ್ಯಲಹರಿಯ 11 ಶ್ಲೋಕಗಳ ಸಾಮೂಹಿಕ ಪಠಣ ಮಾಡಬೇಕು" ಎಂದು ಹೇಳಿದರು.