ಬೆಂಗಳೂರು, ಜ.18 (Daijiworld News/PY) : ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿರುವುದು ರಾಜ್ಯದ ಜನರ ಸಮಸ್ಯೆ ಪರಿಹಾರಕ್ಕಲ್ಲ ಬದಲಾಗಿ ಸುಳ್ಳು ಹೇಳುವುದಕ್ಕೆ ಬಂದಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಮಹಾದಾಯಿ ನದಿ ನೀರು ವಿಚಾರದ ಬಗ್ಗೆ ಹುಬ್ಬಳ್ಳಿಯಲ್ಲಿ ಅಮಿತ್ ಶಾ ಅವರು ಸ್ಪಷ್ಟಪಡಿಸಬೇಕು. ಪ್ರವಾಹ ಪ್ರದೇಶಗಳಿಗೆ ಕಡಿಮೆ ಪರಿಹಾರ ನೀಡಿರುವ ಬಗ್ಗೆ ಮಾತನಾಡಬೆಕು ಎಂದು ಹೇಳಿದರು.
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆ ಅವರ ಮೇಲೆ ಎಸ್ಡಿಪಿಐ ದಾಳಿ ಸಂಚಿನ ಬಗ್ಗೆ ಮಾತನಾಡಿದ ಅವರು, ಯಾರ ಮೇಲೆ ದಾಳಿಯಾದರೂ ಅದು ತಪ್ಪು, ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ. ಯಾರ ಮೇಲೂ ದಾಳಿಯಾಗಬಾರದು ಎಂದರು.
ನನಗೆ ಎಸ್ಡಿಪಿಐ ನಿಷೇಧದ ಬಗ್ಗೆ ತಿಳಿದಿಲ್ಲ. ಆದರೆ ಇದೇ ರೀತಿ ಆರ್ಎಸ್ಎಸ್ ಕೂಡಾ ಸಮಾಜ ವಿರೋಧಿ ಕಾರ್ಯವನ್ನು ಮಾಡುತ್ತಿದೆ. ನಾನು ಆರ್ಎಸ್ಎಸ್ ನಿಷೇಧಿಸಬೇಕೆಂದು ಹೇಳುತ್ತಿಲ್ಲ ಎಂದು ಹೇಳಿದರು.
ಶಾಸಕಾಂಗ ಹಾಗೂ ವಿಪಕ್ಷ ನಾಯಕ ಸ್ಥಾನಗಳನ್ನು ಬೇರ್ಪಡಿಸುವುದು ಬೇಡ ಎಂದು ವರಿಷ್ಠರ ಮುಂದೆ ನನ್ನ ಅಭಿಪ್ರಾಯ ತಿಳಿಸಿದ್ದೇನೆ. ಈ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳುವುದು ಹೈಕಮಾಂಡ್ಗೆ ಬಿಟ್ಟಿದ್ದು. ಮಹಾರಾಷ್ಟ್ರದ ರಾಜಕೀಯದ ಸ್ಥಿತಿಯೇ ಬೇರೆ, ಕರ್ನಾಟಕದ ರಾಜಕೀಯದ ಸ್ಥಿತಿಯೇ ಬೇರೆ. ಮಹಾರಾಷ್ಟ್ರಕ್ಕೆ ಕರ್ನಾಟಕವನ್ನು ಹೋಲಿಸಬಾರದು ಎಂದು ತಿಳಿಸಿದರು.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯ ಸಂದರ್ಭ ಸಚಿವ ಸಂಪುಟದ ವಿಸ್ತರಣೆಯ ಕಾರ್ಯ ತಡವಾಗಿರಲಿಲ್ಲ. ನಮಗೆ ಪಕ್ಷದ ವರಿಷ್ಠರು ಎಲ್ಲಾ ರೀತಿಯಲ್ಲಿ ನೆರವಾಗಿದ್ದರು ಎಂದು ಹೇಳಿದರು.